ಸಾಂಸ್ಕೃತಿಕ ಚಟುವಟಿಕೆಯಿಂದ ಬೌದ್ಧಿಕ ಕ್ರಿಯಾಶೀಲತೆ

Published on

ಕೊಳ್ಳೇಗಾಲ: ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲರನ್ನು ಮಾನಸಿಕವಾಗಿ ಕ್ರೀಯಾಶೀಲವಾಗಿಸುತ್ತದೆ ಎಂದು ಬೆಂಗಳೂರಿನ ಎಚ್‌ಡಿಎಫ್‌ಸಿ ಬ್ಯಾಂಕಿನ ಉಪಾಧ್ಯಕ್ಷ ಡಾ.ಸನತ್ ತಿಳಿಸಿದರು.

ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಗೂ ಎದುರಾಗುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಲು ಅಗತ್ಯವಿರುವ ಶಕ್ತಿಯನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಡೆಯಬಹುದಾಗಿದೆ. ಜೀವನದಲ್ಲಿ ಇರುವ ಏರುಪೇರಿನಂತೆ ಕ್ರೀಡೆಯಲ್ಲೂ ಸೋಲು-ಗೆಲುವು ಇರುತ್ತದೆ. ಇವೆರಡನ್ನೂ ಸಮಾನವಾಗಿ ಸ್ವೀಕರಿಸಬೇಕಿದೆ. ಸೋತಾಗ ನಿಮ್ಮಿಂದ ಆದ ನ್ಯೂನತೆಗಳನ್ನು ಗುರುತಿಸಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು.

ಚಲನಚಿತ್ರ ನಟ ಸುಪ್ರೀತ್ ಮಾತನಾಡಿ, ನಾನು ಜೆಎಸ್‌ಎಸ್ ವಿದ್ಯಾಸಂಸ್ಥೆಯಲ್ಲಿಯೇ ಓದಿದವನು. ಇಂದು ಇದೇ ಸಂಸ್ಥೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯವೇ ಸರಿ. ಜೀವನದಲ್ಲಿ ಗುರಿ ಹಾಗೂ ಆಸೆ ದೃಢವಾಗಿರಬೇಕು. ಆಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು.

ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಹರಿಪ್ರಸಾದ್ ಹಾಗೂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಕೊಂಗಳಪ್ಪ ಮಾತನಾಡಿದರು. ಮೈಸೂರು ವಿ.ವಿ. ಪಿಎಂಇಬಿ ನಿರ್ದೇಶಕ ಡಾ.ಎನ್.ನಾಗರಾಜು, ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಭ್ರಮರಾಂಭ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಧರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net