ಅನರ್ಹರಿಗೆ ಪಿಂಚಣಿ, ಉಪತಹಸೀಲ್ದಾರ್ ಅಮಾನತು

Published on

ಯಳಂದೂರು: ಅಗರ ಹೋಬಳಿ ವ್ಯಾಪ್ತಿಯಲ್ಲಿ ಅನರ್ಹರಿಗೆ ಸಾಮಾಜಿಕ ಪಿಂಚಣಿ ಮಂಜೂರು ಮಾಡಿ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ಅಗರ-ಮಾಂಬಳ್ಳಿ ನಾಡ ಕಚೇರಿಯ ಉಪತಹಸೀಲ್ದಾರ್ ಪುಷ್ಪಾವತಿ ಅವರನ್ನು ಅಮಾನತುಗೊಳಿಸಿ ಮೈಸೂರು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಆದೇಶಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಅನರ್ಹರಿಗೆ ಪಿಂಚಣಿ ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಇದಕ್ಕೆ ತನಿಖಾ ತಂಡ ನೇಮಿಸಿದ ಜಿಲ್ಲಾಧಿಕಾರಿ ವರದಿ ಪಡೆದುಕೊಂಡಿದ್ದರು. ಈ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ರಾಜಸ್ವ ನಿರೀಕ್ಷಕರು ಮತ್ತು ನಾಲ್ವರು ಗ್ರಾಮ ಆಡಳಿತಾಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ಉಪತಹಸೀಲ್ದಾರ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾತುಗೊಳಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದರು.

ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಒಟ್ಟು 78 ಕಡತಗಳನ್ನು ಪರಿಶೀಲಿಸಿ ಇದರಲ್ಲಿ 73 ಅರ್ಜಿಗಳಲ್ಲಿ ವಯಸ್ಸಿಗೆ ಸಂಬಂಧಿಸಿದಂತೆ ವೈದ್ಯರ ದೃಢೀರಕಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ದಾಖಲೆಗಳಲ್ಲಿ ಆಯ್ಕೆಗೊಂಡ ವಯಸ್ಸಿಗಿಂತಲೂ ಕಡಿಮೆ ಇದ್ದುದು ಕಂಡುಬಂದಿತ್ತು. ಅಗರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ನೀಡಿರುವ ನಕಲಿ ಸಾಮಾಜಿಕ ಪಿಂಚಣಿಯಿಂದ ಒಟ್ಟು ಸರ್ಕಾರಕ್ಕೆ 2,53,200 ರೂ. ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿ ನೀಡಲಾಗಿತ್ತು. ಆದರೆ ಇದಕ್ಕೆ ಇವರು ನೀಡಿರುವ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net