ಹಬ್ಬಗಳು ಶಾಂತಿ-ಸೌಹಾರ್ದ ಪ್ರತೀಕ

30 HANUR 2
Published on

ಹನೂರು; ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ನಡೆಯುತ್ತಿರುವ ಊರುಕಾತಮ್ಮ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಎಂ.ಆರ್.ಮಂಜುನಾಥ್ ಅವರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಗ್ರಾಮಸ್ಥರಿಗೆ ಹಬ್ಬದ ಶುಭಾಶಯ ಕೋರಿದರು.
ಕಾಲ್ನಡಿಗೆಯಲ್ಲಿ ಬಡಾವಣೆಯ ಬೀದಿಗಳಿಗೆ ತೆರಳಿದ ಶಾಸಕರನ್ನು ಗ್ರಾಮಸ್ಥರು ಶಾಲು, ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ವೇಳೆ ಶಾಸಕ ಮಾತನಾಡಿ, ಹಬ್ಬಗಳು ಶಾಂತಿ ಸೌಹಾರ್ದತೆಯ ಪ್ರತೀಕ. ಜತೆಗೆ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ. ಇದರ ಆಚರಣೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮೂಲಕ ಗ್ರಾಮಸ್ಥರಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸುತ್ತದೆ. ಇದು ಗ್ರಾಮದ ಅಭಿವೃದ್ಧಿಗೂ ಸಹಕಾರಿಯಾಗಿದೆ. ಈ ದಿಸೆಯಲ್ಲಿ ಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಹಾಗಾಗಿ ಆ ದೇವರು ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಆಶಿಸಿದರು.

ಇದೇ ವೇಳೆ ಗ್ರಾಮಸ್ಥರು ಕೆಲವು ಸಮಸ್ಯೆಗಳನ್ನು ಹೇಳಿಕೊಂಡರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಕ್ಷೇತ್ರದ ಸಮಸ್ಯೆಯ ಬಗ್ಗೆ ಈಗಾಗಲೇ ಅರಿವಿದ್ದು, ಬಗೆಹರಿಸುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಹಂತ-ಹಂತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಮುಖಂಡರಾದ ಮಹದೇವಸ್ವಾಮಿ, ಮಹೇಶ್, ಸೋಮಣ್ಣ, ಮಂಜೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net