

ಚಾಮರಾಜನಗರ : ಪ್ರತಿಯೊಬ್ಬ ವಿದ್ಯಾರ್ಥಿಗೂ ಜೀವನದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ ಎಂದು ಮೈಸೂರಿನ ಮಾನಸಗಂಗೋತ್ರಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಜೆ. ಸೋಮಶೇಖರ್ ಕರೆ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಂಸ್ಕೃತಿಕ, ಕ್ರೀಡೆ, ಅಭಿವ್ಯಕ್ತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ಬೋಧನೆ ಮಾಡುವಾಗ ತಮ್ಮ ಗಮನವನ್ನು ಬೇರೆಡೆಗೆ ಹರಿಸದೇ ಏಕಾಗ್ರತೆಯಿಂದ ಕಲಿಯಬೇಕು. ಇದು ಪರೀಕ್ಷೆ ಸಂದರ್ಭದಲ್ಲಿ ಉತ್ತಮ ಅಂಕಗಳಿಸಲು ಸಹಕಾರಿಯಾಗುತ್ತದೆ. ಕಾಲೇಜಿನಲ್ಲಿ ನಡೆಯುವ ವಿಚಾರ ಸಂಕಿರಣ ಹಾಗೂ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವ ಮಾಹಿತಿಗಳನ್ನೂ ಕೇಳುವ ಜತೆಗೆ ವಿದ್ಯಾರ್ಥಿಗಳು ಬರೆದುಕೊಳ್ಳುವ ಅಭಿರುಚಿ ಗಳಿಸಿಕೊಂಡಾಗ ಮಾತ್ರ ಉತ್ತಮ ಜ್ಞಾನ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪ್ರೊ.ಎಸ್.ಚಂದ್ರಮ್ಮ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಪಿ.ದೇವರಾಜು, ಉಪನ್ಯಾಸಕ ಡಾ.ಚಿನ್ಮಯ್ ಭಟ್, ಡಾ.ಪಿ.ಎಂ.ನಾಗೇಂದ್ರ ಕುಮಾರ್, ಲೋಕೇಶ್, ಡಾ.ಜಿ.ಮಲ್ಲೇಶ್, ಎಂ.ಕೆ.ಮಂಜುನಾಥ್, ಎಂ.ಮಹದೇವಸ್ವಾಮಿ, ಎಂ.ಚಂದ್ರಕಲಾ, ಡಾ.ನೀಲಕಂಠಸ್ವಾಮಿ, ಗ್ರಂಥ ಪಾಲಕಿದೀಪಿಕಾ ಹಾಗೂ ಇತರರು ಭಾಗವಹಿಸಿದ್ದರು.