

ಚಾಮರಾಜನಗರ : ರಾಜ್ಯ ವಿಧಾನಪರಿಷತ್‌ಗೆ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ಬಿಜೆಪಿ ಯಿಂದ ಉಪ್ಪಾರ ಸಮುದಾಯಕ್ಕೆ ಈ ಬಾರಿ ಪ್ರಾತಿನಿಧ್ಯ ನೀಡಬೇಕು ಎಂದು ಉಪ್ಪಾರ ಸಮುದಾಯದ ಮುಖಂಡ ಆನಂದ್ ಭಗೀರಥ ಒತ್ತಾಯಿಸಿದರು.
ರಾಜ್ಯದಲ್ಲಿ ವಿಧಾನಪರಿಷತ್‌ಗೆ 11 ಜನರನ್ನು ನೇಮಕ ಮಾಡುವ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ. ಈ ಬಾರಿ ಬಿಜೆಪಿಗೆ 3 ಸ್ಥಾನಗಳು ದೊರಕುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಉಪ್ಪಾರ ಸಮುದಾಯವನ್ನು ಈ ಬಾರಿ ಪರಿಗಣಿಸಬೇಕು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈವರೆಗೆ ಉಪ್ಪಾರ ಸಮುದಾಯದ ಯಾರೊಬ್ಬರೂ ವಿಧಾನಪರಿಷತ್ತಿನ ಸದಸ್ಯನಾಗಲು ಸಾಧ್ಯವಾಗಿಲ್ಲ. ಬಿಜೆಪಿಯಿಂದ ರಾಜ್ಯದಲ್ಲಿ ಉಪ್ಪಾರ ಸಮುದಾಯಕ್ಕೆ ಎಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿರುವುದಿಲ್ಲ. ಹಾಗಾಗಿ ಈ ಬಾರಿಯ ವಿಧಾನ ಪರಿಷತ್‌ಗೆ ಸದಸ್ಯರನ್ನು ನೇಮಕ ಮಾಡುವಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ಬಗ್ಗೆ ಗಮನಹರಿಸಿ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿರುವ ಉಪ್ಪಾರ ಸಮುದಾಯದ ಮುಖಂಡರಿಗೆ ಅವಕಾಶ ಮಾಡಿಕೊಡಬೇಕು. ಈ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಡಿಯಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಿ.ಎಂ.ಕೃಷ್ಣಕುಮಾರ್, ಪೋಟೋ ಕೃಷ್ಣ, ಉಮೇಶ್, ರಾಜೇಂದ್ರ ಹಾಜರಿದ್ದರು.