ಮತ ಎಣಿಕೆಗೆ ಸಹಕಾರ ನೀಡಿ

29rajesh9
Published on

ಚಾಮರಾಜನಗರ: ಲೋಕಸಭಾ ಚುನಾವಣೆಯ ಮತ ಎಣಿಕೆಯು ನಗರದಲ್ಲಿ ಜೂ.4ರಂದು ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಹಕಾರ ನೀಡುವಂತೆ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮತ ಎಣಿಕೆ ಕಾರ್ಯದ ಪ್ರಕ್ರಿಯೆಗಳ ಬಗ್ಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮಾಹಿತಿ ನೀಡುವ ಸಲುವಾಗಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪ್ರತಿನಿಧಿಗಳೊಂದಿಗೆ ಬುಧವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮತ ಎಣಿಕೆ ಕಾರ್ಯ ಜೂ.4ರಂದು ಬೆಳಗ್ಗೆ 8 ಗಂಟೆಗೆ ನಗರದ ನಂಜನಗೂಡು ರಸ್ತೆಯಲ್ಲಿರುವ ಬೇಡರಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು, ಏಜೆಂಟರು ಕಡ್ಡಾಯವಾಗಿ ಚುನಾವಣಾಧಿಕಾರಿಗಳು ನೀಡಿರುವ ಗುರುತಿನ ಚೀಟಿಯನ್ನು ಧರಿಸಿ ಆಗಮಿಸಬೇಕು. ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಎಣಿಕೆ ಕಾರ್ಯದ ಸಿದ್ಧತಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗಿದೆ ಎಂದರು.

ಮತ ಎಣಿಕೆ ಕೇಂದ್ರದ ಕೊಠಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಂತೆ, 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 112 ಮತ ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಎಣಿಕೆ ಕೇಂದ್ರದಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ.

ಚುನಾವಣಾಧಿಕಾರಿಗಳ ಸಮಾಕ್ಷಮದಲ್ಲಿ ನಡೆಯಲಿರುವ ಅಂಚೆ ಮತಪತ್ರಗಳ ಎಣಿಕೆಗಾಗಿ 8 ಮತ ಎಣಿಕೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಸೇವಾ ಮತದಾರರು ಮತದಾನ ಮಾಡಿ ಕಳುಹಿಸಿರುವ ಮತಪತ್ರಗಳ ಎಣಿಕೆಯನ್ನು ಇಟಿಪಿಬಿಎಸ್ ತಂತ್ರಾಂಶದಲ್ಲಿ ನಡೆಸಲು 2 ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಅಂಚೆ ಮತಪತ್ರಗಳಿಗೆ ಸಂಬಂಧಿಸಿದಂತೆ 1372 ಮತದಾರರು ಮನೆಯಲ್ಲಿಯೆ (ಊ ಗಿಣಟಿ) ಮತದಾನ ಮಾಡಿದ್ದಾರೆ. 2382 ಚುನಾವಣಾ ಕರ್ತವ್ಯ ಅಧಿಕಾರಿ ಹಾಗೂ ಸಿಬ್ಬಂದಿ, 458 ಅತ್ಯಗತ್ಯ ಕರ್ತವ್ಯನಿರತ ಸಿಬ್ಬಂದಿ ಹಾಗೂ 192 ಸೇವಾ ಮತದಾರರು ಸೇರಿದಂತೆ ಒಟ್ಟು 4404 ಅಂಚೆ ಮತಪತ್ರಗಳ ಎಣಿಕೆ ಕಾರ್ಯವೂ ನಡೆಯಲಿದೆ. ಅಲ್ಲದೆ ಸೇವಾ ಮತದಾರರು (ಇಟಿಪಿಬಿಎಸ್) ಮತದಾನ ಮಾಡಿ ಕಳುಹಿಸುವ ಅಂಚೆ ಮತಪತ್ರಗಳನ್ನು ಮತ ಎಣಿಕೆ ಕಾರ್ಯ ನಡೆಯುವ ಜೂನ್ 4ರ ಬೆಳಗ್ಗೆ 7.50 ಗಂಟೆಯವರೆಗೂ ಸ್ವೀಕರಿಸಲಾಗುವುದು. ನಂತರ ಬರುವ ಸೇವಾ ಮತದಾರರ ಅಂಚೆ ಮತಪತ್ರವನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿದರು.

ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26ರಂದು ನಡೆದ ಮತದಾನ ಹಾಗೂ ಏಪ್ರಿಲ್ 29ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಮರು ಮತದಾನವು ಸೇರಿದಂತೆ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು ಶೇ. 76.82ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 878702 ಪುರುಷರು, 899501 ಮಹಿಳೆಯರು ಹಾಗೂ 107 ಇತರ ಸೇರಿದಂತೆ ಒಟ್ಟು 1778310 ಮತದಾರರಿದ್ದು, ಈ ಪೈಕಿ 682993 ಪುರುಷರು, 682991 ಮಹಿಳೆಯರು ಹಾಗೂ 31 ಇತರ ಮತದಾರರು ಸೇರಿದಂತೆ ಒಟ್ಟು 1366015 ಜನರು ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತದಾನವು (ಶೇ. 82.35) ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ಕೀರ್ತನಾ, ಚುನಾವಣಾ ಶಿರಸ್ತೇದಾರ್ ಬಸವರಾಜು, ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎಸ್.ನಿಂಗರಾಜು, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಅಭ್ಯರ್ಥಿ ಕಂದಳ್ಳಿ ಮಹೇಶ್, ಪಕ್ಷೇತರ ಅಭ್ಯರ್ಥಿಗಳಾದ ಎನ್.ಅಂಬರೀಷ್, ಬಿ.ಎಂ. ಮಹದೇವಸ್ವಾಮಿ, ಜಿ.ಡಿ.ರಾಜಗೋಪಾಲ, ಎಚ್.ಕೆ. ಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಎಚ್. ನಸ್ರುಲ್ಲಾ ಖಾನ್, ಮಹೇಶ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net