

ಗುಂಡ್ಲುಪೇಟೆ: ಶೈಕ್ಷಣಿಕ ವರ್ಷ ಆರಂಭವಾದ ಬುಧವಾರ ಪಟ್ಟಣದ ಶ್ರೀಮದ್ದಾನೇಶ್ವರ ವಿದ್ಯಾಸಂಸ್ಥೆಯು ತನ್ನ ಶಾಲೆಗಳನ್ನು ಸಿಂಗಾರಗೊಳಿಸಿ ಎಲ್ಲೆಡೆಯೂ ಗುಲಾಬಿ ಹೂವಿನ ಸ್ವಾಗತದೊಂದಿಗೆ ಮಕ್ಕಳನ್ನು ಬರಮಾಡಿಕೊಂಡು ಮಕ್ಕಳಿಗೆ ಮಧ್ಯಾಹ್ನ ಸಿಹಿಯೂಟ ಬಡಿಸಲಾಯಿತು.
ಮೊದಲನೇ ದಿನ ಶಾಲೆಯನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಬೇಸಿಗೆ ರಜೆಯನ್ನು ಮುಗಿಸಿ ಶಾಲೆಯತ್ತ ತೆರಳಿದ ಚಿಣ್ಣರು ತಮ್ಮ ಸಹಪಾಠಿಗಳನ್ನು ಕಂಡು ಹರ್ಷದಿಂದ ನಲಿದಾಡಿದರು. ರಜೆಯಲ್ಲಿ ಕಳೆದ ಸುಂದರ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಹೊಸ ತರಗತಿಗೆ ಪದಾರ್ಪಣೆ ಮಾಡಿದರು.
ಶ್ರೀಮದ್ದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ರಜೆಯ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಗೆ ಆಗಮಿಸಿದ ಚಿಣ್ಣರನ್ನು ಶಾಲೆಯ ಶಿಕ್ಷಕರು ಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಸ್ವಾಮಿ ಸ್ವಾಗತಿಸಿದರು. ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ಬದಲು ಅವರ ಯೋಗಕ್ಷೇಮ, ರಜೆ ದಿನಗಳನ್ನು ಕಳೆದ ಬಗ್ಗೆ ವಿಚಾರಿಸಿ ಮಕ್ಕಳ ಮನಸ್ಸನ್ನು ಅರಿತುಕೊಂಡರು.
ಗಮನ ಸೆಳೆದ ಸೆಲ್ಫಿ ಕಾರ್ನರ್:
ಶ್ರೀಮದ್ದಾನೇಶ್ವರ ವಿದ್ಯಾಸಂಸ್ಥೆಯು ಶಾಲೆಯನ್ನು ಸಿಂಗರಿಸಿ ಸೆಲ್ಫಿ ಕಾರ್ನರ್ ನಿರ್ಮಿಸಿತ್ತು. ಮಕ್ಕಳನ್ನು ಬಿಡಲು ಬಂದ ಪಾಲಕರು ಮಕ್ಕಳೊಂದಿಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂತಸಪಟ್ಟರು. ಶಾಲೆಯ ಮುಖ್ಯಶಿಕ್ಷಕ ಎಂ.ಪ್ರಕಾಶ್, ಸೋಮಶೇಖರ್, ಶಿಕ್ಷಕರಾದ ಮಹೇಶಪ್ಪ, ಮೋಹನ್, ಕೆ.ಎಸ್.ವಿಶ್ವನಾಥ್ ಭಾರದ್ವಾಜ್, ರಾಜೇಶ್, ಅನಿಲ್‌ಕುಮಾರ್, ಮಲ್ಲೇಶ್, ಸೌಮ್ಯಾ, ಮಹಾಲಕ್ಷ್ಮೀ, ಶಿಲ್ಪಾ, ಪೂರ್ಣಿಮಾ, ನಾಗವೇಣಿ, ಗೋವಿಂದರಾಜು, ದೈಹಿಕ ಶಿಕ್ಷಣ ಶಿಕ್ಷಕ ಸ್ವಾಮಿ, ಮಂಜುಳಾ, ನಂದೀಶ್, ಮನು, ಮದುಕಿರಣ್ ಮತ್ತಿತರರು ಹಾಜರಿದ್ದರು.