

ಹನೂರು: ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಶೌಚಗೃಹ ನಿರ್ಮಾಣ ಕುರಿತು ಜಿಪಿಎಸ್ ಮಾಡುವುದರ ಮೂಲಕ ಇನ್ನೆರಡು ದಿನದಲ್ಲಿ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಪಂ ಸ್ವಚ್ಛ ಭಾರತ್ ಮಿಷನ್ ಯೋಜನಾಧಿಕಾರಿ ಕಿರಣ್ ಪಡ್ನೇಕರ್ ಸೂಚಿಸಿದರು.
ವಿವಿಧ ವಸತಿ ಯೋಜನೆ ಹಾಗೂ ಶೌಚಗೃಹಗಳ ನಿರ್ಮಾಣ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರತಿ ಕುಟುಂಬ ಶೌಚಗೃಹ ಹೊಂದಬೇಕು ಎನ್ನುವುದು ಸರ್ಕಾರದ ಆಶಯ. ಹನೂರು ತಾಲೂಕಿನಲ್ಲಿ 50 ಸಾವಿರ ಕುಟುಂಬಗಳಿದ್ದು, 36,791 ಶೌಚಗೃಹ ನಿರ್ಮಿಸಲಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಜನರಲ್ಲಿ ಅರಿವು ಮೂಡಿಸಬೇಕು. ಒಂದು ವೇಳೆ ನಿವೇಶನ ಇಲ್ಲದಿದ್ದಲ್ಲಿ ಸಮುದಾಯ ಶೌಚಗೃಹ ನಿರ್ಮಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಇಂಗು ಗುಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ತಾಲೂಕಿನ 25 ಗ್ರಾಪಂಗಳ ಪೈಕಿ 9 ಪಂಚಾಯಿತಿಯಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದ್ದು, ಇನ್ನುಳಿದ 16 ಪಂಚಾಯಿತಿಗಳಲ್ಲಿ ಸೂಕ್ತ ನಿವೇಶನ ಗುರುತಿಸಿ ಘಟಕ ನಿರ್ಮಿಸಲು ಮುಂದಾಗಬೇಕು. ಈಗಾಗಲೇ ಡಾ.ಬಿ.ಆರ್ ಅಂಬೇಡ್ಕರ್, ಬಸವ ಹಾಗೂ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಫಲಾನುಭವಿಗಳಿಗೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಿಳಿ ಹೇಳಬೇಕು. ತಾಂತ್ರಿಕ ಸಮಸ್ಯೆಗಳಿಂದ ಮನೆ ಬಿಲ್ ಪಾವತಿಗೆ ಸಮಸ್ಯೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಇದರಲ್ಲಿ ಯಾವುದೇ ತಾತ್ಸಾರ ಸಲ್ಲದು ಎಂದರು.
ಕಸ ವಿಲೇವಾರಿಗೆ ಗ್ರಾಪಂಗಳಲ್ಲಿ ವಾಹನವಿದೆ. ಆದರೆ ಕೆಲವು ವಾಹನಗಳಿಗೆ ವಿಮೆ ಇಲ್ಲದಿರುವುದು ಹಾಗೂ ನವೀಕರಣಗೊಳ್ಳದಿರುವುದು ಗಮನಕ್ಕೆ ಬಂದಿದೆ. ಇದರಿಂದ ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಪಿಡಿಒಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ವಿಮೆ ಮಾಡಿಸಬೇಕು. ಇನ್ನು ಎನ್‌ಆರ್‌ಎಲ್‌ಎಂ ಯೋಜನೆಯಡಿ ಕಸ ವಿಲೇವಾರಿ ವಾಹನಕ್ಕೆ ನಿಯೋಜನೆಗೊಂಡ ಮಹಿಳಾ ಚಾಲಕರೇ ಕಡ್ಡಾಯವಾಗಿ ಕಸವನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ತಾಪಂ ಇಒ ಉಮೇಶ್ ಮಾತನಾಡಿ, ವಸತಿ ಯೋಜನೆಗಳ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಗತ್ತಿಸುವಾಗ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಲೋಪದಿಂದ ಕೂಡಿದ್ದಲ್ಲಿ ಡೇಟಾ ಎಂಟ್ರಿ ಅಪರೇಟರ್‌ಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ನೋಟಿಸ್ ಜಾರಿ ಮಾಡಿ: ಪ್ರಗತಿ ಪರಿಶೀಲನಾ ಸಭೆಗೆ ತಾಲೂಕಿನ 24 ಗ್ರಾಪಂ ಗಳಿಂದ ಪಿಡಿಒಗಳು ಆಗಮಿಸಿದ್ದು, ಅಗತ್ಯ ಮಾಹಿತಿ ಹಾಗೂ ಸೂಚನೆ ನೀಡಲಾಯಿತು. ಆದರೆ ಬೈಲೂರು ಗ್ರಾಪಂ ಪಿಡಿಒ ಗೋವಿಂದಪ್ಪ ಆಗಮಿಸಿರಲಿಲ್ಲ. ಈ ಬಗ್ಗೆ ತಿಳಿದ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು. ಸಭೆಯಲ್ಲಿ ಜಿಪಂ ಮಾಹಿತಿ ತಂತ್ರಜ್ಞಾನ ಸಂಯೋಜಕ ಪುನೀತ್, ವಸತಿ ಯೋಜನೆಯ ನೋಡಲ್ ಅಧಿಕಾರಿ ಸತೀಶ್, ಸ್ವಚ್ಛ ಭಾರತ್ ಮಿಷನ್ ಸಂಯೋಜಕ ಮನು, ಘನತ್ಯಾಜ್ಯ ಘಟಕದ ನೋಡೆಲ್ ಅಧಿಕಾರಿ ಜೋಸೆಫ್ ಇದ್ದರು.