ಜಾತಿ, ಹಣದ ಆಧಾರದ ಮೇಲೆ ರಾಜಕಾರಣ

Published on

ಚಾಮರಾಜನಗರ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜಾತಿ, ಹಣದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.


ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ ಮುಂಭಾಗ ಶುಕ್ರವಾರ ಈಡುಗಾಯಿ ಒಡೆದು ಕನ್ನಡ ಉಳಿಸಿ, ಕನ್ನಡ ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
2023 ಚುನಾವಣೆಯನ್ನು ಕರ್ನಾಟಕ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಯಲ್ಲಿ ಬಹಿರಂಗವಾಗಿ ಜನರಿಗೆ ದುಡ್ಡು ಹಂಚುತ್ತಿದ್ದಾರೆ. ಟಿವಿ, ಕುಕ್ಕರ್ ಕೊಡಲಾಗುತ್ತಿದೆ. ಮತದಾರರು ಬದಲಾವಣೆ ಆಗಿಲ್ಲ. ರಾಜಕಾರಣಿಗಳು ಬದಲಾಗಿಲ್ಲ. ಚುನಾವಣಾ ಆಯೋಗ ಪ್ರಾಮಾಣಿಕವಾಗಿ ಕರ್ನಾಟಕದ ಮೂಲೆಮೂಲೆಗೂ ಕಣ್ಣಿಡಬೇಕು ಎಂದರು.


ಚುನಾವಣೆಗೂ ಮುನ್ನವೇ ಈಗಾಗಲೇ ಎಷ್ಟು ಖರ್ಚು ಆಗಬೇಕು ಅದನ್ನು ಮಾಡಿಬಿಟ್ಟಿದ್ದಾರೆ. ಉಳಿದಿರುವುದು ಚುನಾವಣಾ ಘೋಷಣೆ ಮಾತ್ರ. ಆಯೋಗ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಚುನಾವಣೆ ಬೇಕಾಗಿಲ್ಲ. ಮುಂದೂಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಸಾರೋಟಿನಲ್ಲಿ ವಾಟಾಳ್ ನಾಗರಾಜ್ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಚಾ.ರಂ.ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಚಾ.ರಾ.ಕುಮಾರ್, ಗೋಪಾಲ್‌ನಾಯಕ, ಶಿವಲಿಂಗಮೂರ್ತಿ, ಪಣ್ಯದಹುಂಡಿ ರಾಜು, ವರದನಾಯಕ, ಬಸಪ್ಪನಪಾಳ್ಯ ಕುಮಾರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net