ಕಣ್ಣುಗಳ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸಿ

Published on

ಗುಂಡ್ಲುಪೇಟೆ: ಕಣ್ಣು ಅತ್ಯಂತ ಅಮೂಲ್ಯವಾದ ಅಂಗವಾಗಿದ್ದು, ಎಲ್ಲರೂ ಕಣ್ಣುಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕಾಂತ್ ಹೇಳಿದರು.

ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಸುರಾನ ಕಾಲೇಜು ಗ್ರಾಮೀಣ ಯೋಜನೆ ಮತ್ತು ಕಾಲೇಜು ಸಹಯೋಗದಲ್ಲಿ ಪಟ್ಟಣದ ಗುರುಭವನದಲ್ಲಿ ಬುಧವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಂಡು ಬರುತ್ತಿದ್ದ ಸಮಸ್ಯೆ ಈಗ ಮಕ್ಕಳಲ್ಲಿಯೂ ಸಾಮಾನ್ಯವಾಗುತ್ತಿದೆ. ಇದರಿಂದ ಮಕ್ಕಳು ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ ಎಂದರು.

ಕಣ್ಣುಗಳನ್ನು ಕಳೆದುಕೊಂಡರೆ ಮತ್ತೊಬ್ಬರನ್ನು ಅವಲಂಬಿಸುವುದು ಅನಿವಾರ್ಯ. ಇತ್ತೀಚೆಗೆ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಗಮನಹರಿಸುವ ಜತೆಗೆ ಸ್ವಯಂಸೇವಾ ಸಂಸ್ಥೆಗಳು ಆಯೋಜಿಸುವ ಉಚಿತ ಶಿಬಿರಗಳ ಪ್ರಯೋಜನವನ್ನು ಪಡೆಯಬೇಕು ಎಂದರು.

ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಸುಜಯ್ ಗಜು, ಡಾ.ಚಂದ್ರವದನ ಅವರು ಕಣ್ಣಿನ ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿರ ಮತ್ತು ದೂರ ದೃಷ್ಟಿ ದೋಷ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ವಾರೆಗಣ್ಣು, ರಾತ್ರಿ ಕುರುಡುತನದ ಸಮಸ್ಯೆಯಿದ್ದ 160 ಜನರನ್ನು ತಪಾಸಣೆ ನಡೆಸಿದರು. ಶಸ್ತ್ರಚಿಕಿತ್ಸೆ ಅಗತ್ಯವಿದ್ದ 47 ಜನರನ್ನು ಕೊಯಮತ್ತೂರಿನ ಆಸ್ಪತ್ರೆಗೆ ಕರೆದೊಯ್ದರು.

ಲಯನ್ಸ್ ಸಂಸ್ಥೆಯ ಎನ್.ನಾಗೇಂದ್ರ, ಶಂಕರನಾರಾಯಣ ಜೋಯಿಸ್, ಎಂ.ಸಿ.ಶಿವಪ್ರಸಾದ್, ಅನುಗ್ರಹ ಫೌಂಡೇಷನ್ ಸಂಚಾಲಕ ಕೆ.ರಮೇಶ್, ಸಂಜೀವಿನಿ ಘಟಕದ ವಲಯ ಮೇಲ್ವಿಚಾರಕಿ ಪುಟ್ಟಮ್ಮ, ಮುಖಂಡ ನರಸಿಂಹ, ಸುರಾನಾ ಕಾಲೇಜಿನ ಉಪನ್ಯಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net