

ಚಾಮರಾಜನಗರ: ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಸರ್ವರನ್ನೂ ಒಳಗೊಂಡ ಸಹಕಾರ ಚಳವಳಿ ಹಾಸುಹೊಕ್ಕಾಗಿದ್ದು, ಸೌಹಾರ್ದ ಸಹಕಾರಿ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಯ ಪ್ರತಿಯೊಬ್ಬರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.
ನಗರದ ಮಹಾಮನೆ ಸಭಾಂಗಣದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗಾಗಿ ಮಂಗಳವಾರ ಆಯೋಜಿಸಿದ್ದ ಆಡಳಿತ ಪರಿಣತಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹಕಾರ ಕ್ಷೇತ್ರವನ್ನು ಮರು ಸಂಘಟಿಸುವ ದೃಷ್ಟಿಯಿಂದ ಸಹಕಾರಿಗಳಿಗೆ ಸ್ವಾಯತ್ತೆ ನೀಡಲಾಗಿದೆ. ಸ್ವಯಂ ಆಡಳಿತ ಹಾಗೂ ಸ್ವಯಂ ನಿಯಂತ್ರಣದ ಅವಕಾಶವನ್ನು ಒದಗಿಸುವ ದೃಷ್ಟಿಯಿಂದ 2001ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ ಜಾರಿಗೆ ತರಲಾಯಿತು. ಈ ಕಾಯ್ದೆಯಡಿ ಈವರೆಗೆ 6,250ಕ್ಕಿಂತಲೂ ಹೆಚ್ಚಿನ ಸೌಹಾರ್ದ ಸಹಕಾರಿಗಳು ನೋಂದಣಿಯಾಗಿದ್ದಾರೆ. ಆ ಮೂಲಕ 60 ಲಕ್ಷಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿದ್ದು ಉತ್ತಮ ಮತ್ತು ಮಾದರಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಇದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಹಾಗೂ ಆರ್ಥಿಕ ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದು ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿಗಳನ್ನು ಸದೃಢಗೊಳಿಸಬೇಕು ಎಂದರು.
ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ್ ಮಾತನಾಡಿ, ಕಾಯ್ದೆಗಾಗಿ ಸಭೆಗಳು ಆಗಬಾರದು. ಗಡಿಯಲ್ಲಿ ಸೌಹಾರ್ದ ಸಹಕಾರಿಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರಾಜ್ಯ ನಿರ್ದೇಶಕಿ ಭಾರತಿ ಭಟ್, ಲೆಕ್ಕಪರಿಶೋಧನಾ ಉಪ ನಿರ್ದೇಶಕ ರಾಮಪ್ಪ, ಜಿಲ್ಲಾ ನಿರ್ದೇಶಕ ಬಾಲಸುಬ್ರಹ್ಮಣ್ಯಂ, ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ರಾಮಸಮುದ್ರ ಬಾಬು ಇದ್ದರು.