

ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಳೆಯ ಯುಪಿಎಸ್ ಪದೇ ಪದೆ ಕೈಕೊಡುತ್ತಿರುವ ಪರಿಣಾಮ ವಿದ್ಯುತ್ ಕಡಿತವುಂಟಾಗಿ ಕಗ್ಗತ್ತಲಿನಲ್ಲಿಯೇ ಕಾಲಕಳೆಯುವಂತಾಗಿದೆ.
ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಾಲೂಕಿನ ಸುಮಾರು 89 ಗ್ರಾಮಗಳು ಹಾಗೂ ಸುಮಾರು 1.17 ಲಕ್ಷ ಜನಸಂಖ್ಯೆ ಇದೆ. ಅಲ್ಲದೆ ನೆರೆಯ ಎರಡು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು, ಬಂಡೀಪುರ ಅರಣ್ಯ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಅಪಘಾತ, ವನ್ಯಜೀವಿ ದಾಳಿ ಮುಂತಾದ ನಾನಾ ಘಟನೆಗಳು ಸಂಭವಿಸುತ್ತಲೇ ಇದ್ದು, ರಕ್ಷಣೆ ಹಾಗೂ ನ್ಯಾಯಕ್ಕಾಗಿ ಪ್ರತಿ ದಿನವೂ ನೂರಾರು ಜನರು ಇಲ್ಲಿಗೆ ಬರುತ್ತಾರೆ.
ಆದರೆ ಪೊಲೀಸ್ ಠಾಣೆಯ ಯುಪಿಎಸ್ ಹಾಗೂ ಬ್ಯಾಟರಿಗಳು ಹಳೆಯದಾಗಿದ್ದು, ಹೆಚ್ಚುಹೊತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿವೆ. ಇದರಿಂದ ರಾತ್ರಿ ವೇಳೆ ವಿದ್ಯುತ್ ಕಡಿತವುಂಟಾದರೆ ಇಡೀ ಠಾಣೆಯು ಕಗ್ಗತ್ತಲಿನಿಂದ ಆವರಿಸುತ್ತಿದ್ದು ಪೊಲೀಸರಿಗೆ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗಂತಾಗಿದೆ.
ಪೂರ್ವ ಮುಂಗಾರು ಉತ್ತಮವಾಗಿದ್ದು, ಮಳೆಯ ಪರಿಣಾಮ ವಿದ್ಯುತ್ ಕಡಿತವೂ ಸಾಮಾನ್ಯವಾಗಿದೆ. ಈ ವೇಳೆ ಠಾಣೆಯ ಯುಪಿಎಸ್ ಬ್ಯಾಟರಿಗಳು ಬೇಗನೆ ಖಾಲಿಯಾಗುತ್ತಿವೆ. ಇದರಿಂದ ಎಲ್ಲ ದೀಪಗಳು ಆರಿಹೋಗುವುದರಿಂದ ಇಡೀ ಠಾಣೆಯು ಕಗ್ಗತ್ತಲಿನಲ್ಲಿ ಮುಳುಗುತ್ತಿದೆ. ಅನಿವಾರ್ಯವಾಗಿ ಕಂಪ್ಯೂಟರ್‌ಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಕರ್ತವ್ಯನಿರತ ಪೊಲೀಸರು ಹಾಗೂ ಠಾಣೆಗೆ ಆಗಮಿಸುವ ಸಾರ್ವಜನಿಕರು ಬೆಳಕಿಗಾಗಿ ಪರದಾಡುತ್ತಿದ್ದಾರೆ. ಬೆಳಕಿಗಾಗಿ ಠಾಣೆಯ ಆವರಣದಲ್ಲಿ ಅಳವಡಿಸಿರುವ ಎರಡು ಸೋಲಾರ್ ದೀಪಗಳನ್ನೇ ಅವಲಂಬಿಸುವಂತಾಗಿದೆ.
ಭಾನುವಾರ ಮಧ್ಯಾಹ್ನ ಕೆ.ಎಸ್.ನಾಗರತ್ನಮ್ಮ ಬಡಾವಣೆಗೆ ವಿದ್ಯುತ್ ಪೂರೈಸುತ್ತಿದ್ದ ಟ್ರಾನ್ಸ್‌ಫಾರ್ಮರ್ ಕೆಟ್ಟಿದ್ದರಿಂದ ಪಟ್ಟಣದ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಬ್ಯಾಟರಿಗಳಲ್ಲಿ ಸಂಗ್ರಹವಾಗಿದ್ದ ಅಲ್ಪಸ್ವಲ್ಪ ಪವರ್ ಖಾಲಿಯಾಗುತ್ತಿದ್ದಂತೆ ಇಡೀ ಠಾಣೆಯೇ ಕಗ್ಗತ್ತಲಿನಿಂದ ಆವರಿಸಿ ಎಲ್ಲ ಕಂಪ್ಯುಟರ್ ಹಾಗೂ ದೀಪಗಳೂ ಆರಿಹೋದವು.
ಇದೇ ಸಮಯದಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಕೆಲವು ಗ್ರಾಮಗಳ ಜನರು ತಮಗೆ ಸಂಬಂಧಿಸಿದ ಕೇಸುಗಳ ವಿಚಾರಣೆಗೆ ಏಕಕಾಲದಲ್ಲಿ ಆಗಮಿಸಿದ್ದರಿಂದ ಠಾಣೆಯ ಆವರಣ ಜನರಿಂದ ತುಂಬಿಕೊಂಡಿತ್ತು. ಸೋಲಾರ್ ದೀಪಗಳ ಕೆಳಗೆ ನಿಂತ ಅಧಿಕಾರಿಗಳು ಆಯಾ ಕೇಸುಗಳಿಗೆ ಸಂಬಂಧಿಸಿದ ಜನರನ್ನು ಕರೆದು ಸಮಾಧಾನ ಪಡಿಸುತ್ತಿದ್ದರೂ ಒಪ್ಪದ ಕೆಲವರು ಗದ್ದಲ ಎಬ್ಬಿಸುತ್ತಿದ್ದರು.
ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಠಾಣೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಗೊಂದಲಕ್ಕೊಳಗಾದರು. ಆದ್ದರಿಂದ ಇನ್ನಾದರೂ ಪಟ್ಟಣದ ಪೊಲೀಸ್ ಠಾಣೆಗೆ ಅಗತ್ಯವಾದ ಹೊಸ ಯುಪಿಎಸ್ ಹಾಗೂ ಬ್ಯಾಟರಿಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.
ಠಾಣೆಯಲ್ಲಿ ಯುಪಿಎಸ್ ಅಳವಡಿಸಿದ್ದರೂ ಭಾನುವಾರ ಮಧ್ಯಾಹ್ನ ಟ್ರಾನ್ಸ್‌ಫಾರ್ಮರ್ ಕೆಟ್ಟು ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಬ್ಯಾಟರಿಗಳು ಖಾಲಿಯಾಗಿತ್ತು. ಈ ಸಂದರ್ಭದಲ್ಲಿ ಠಾಣೆಯ ದೀಪಗಳು ಹಾಗೂ ಕಂಪ್ಯೂಟರ್ ಬಳಕೆಗೆ ತೊಂದರೆಯಾಗಿತ್ತು. ಠಾಣೆಗೆ ಆಗಮಿಸಿದ್ದ ಸಾರ್ವಜನಿಕರನ್ನು ಆವರಣದ ಸೋಲಾರ್ ದೀಪದ ಬೆಳಕಿನಲ್ಲಿ ಮಾತನಾಡಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲಾಗಿದೆ.ಪರಶಿವಮೂರ್ತಿ,ಸರ್ಕಲ್ ಇನ್ಸ್‌ಪೆಕ್ಟರ್, ಗುಂಡ್ಲುಪೇಟೆ ಪೊಲೀಸ್ ಠಾಣೆ.