

ಚಾಮರಾಜನಗರ : ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ಬೀದಿ ದೀಪಗಳು ಇಲ್ಲದೆ ವಾಹನ ಚಾಲಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದುವ ಬಿ.ರಾಚಯ್ಯ ಜೋಡಿ ರಸ್ತೆಯ ವಿಭಜಕದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಸೂಕ್ತ ರೀತಿಯಲ್ಲಿ ಬೆಳಕು ನೀಡದೆ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹಲವು ಬೀದಿ ದೀಪಗಳು ಕೆಟ್ಟು ನಿಂತಿದ್ದು, ಈವರೆಗೂ ಇದರ ದುರಸ್ತಿಗೊಳಿಸುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಮುಂದಾಗಿಲ್ಲ. ಈ ರಸ್ತೆಯಲ್ಲೇ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ, ಡಿವೈಎಸ್ಪಿ ಕಚೇರಿ, ತಾಲೂಕು ಕಚೇರಿ ಇದೆ. ಇಂತಹ ಪ್ರಮುಖ ರಸ್ತೆಯಲ್ಲಿ ಕಳೆದ 4-5 ತಿಂಗಳಿಂದ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಅಲ್ಲದೆ ಡಿವಿಯೇಷನ್ ರಸ್ತೆ, ಸತ್ತಿ ರಸ್ತೆ, ಗುಂಡ್ಲುಪೇಟೆ ರಸ್ತೆ, ಪಾಲಿಟೆಕ್ನಿಕ್ ಕಾಲೇಜು ರಸ್ತೆ, ಕರಿನಂಜನಪುರ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ರಸ್ತೆ ಹಾಗೂ ಇನ್ನಿತರ ರಸ್ತೆಗಳಲ್ಲಿ ಅಳವಡಿಸಿರುವ ಬೀದಿದೀಪಗಳದ್ದೂ ಇದೇ ಸಮಸ್ಯೆಯಾಗಿದೆ. ಕೆಲವು ಬಡಾವಣೆಗಳಲ್ಲೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದೆ ಬೀದಿ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದರಿಂದಾಗಿ ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಓಡಾಡಲು ಹಾಗೂ ವಾಹನ ಸವಾರರ ಸಂಚಾರಕ್ಕೂ ತೊಡಕುಂಟಾಗಿದೆ. ಇಷ್ಟಾದರೂ ಬೀದಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆ ಮಾಡಲು ನಗರಸಭೆ ವತಿಯಿಂದ ಸೂಕ್ತ ಅನುದಾನ ಬಿಡುಗಡೆ ಮಾಡದೇ ಕತ್ತಲಿನಲ್ಲಿ ಜನರು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾಕಷ್ಟು ಬಾರಿ ನಗರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸಂಚಾರಕ್ಕೆ ತೊಂದರೆ:
ನಗರದ ಬಿ.ರಾಚಯ್ಯ ಜೋಡಿ ರಸ್ತೆ ವಿಭಜಕದ ಬೀದಿ ದೀಪಗಳು ಕೆಟ್ಟು ನಿಂತಿರುವ ಪರಿಣಾಮವಾಗಿ ರಾತ್ರಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಸೂಕ್ತವಾದ ಫುಟ್‌ಪಾತ್ ಸೌಲಭ್ಯವಿಲ್ಲದೆ ಪಾದಚಾರಿಗಳು ರಸ್ತೆ ಬದಿಯಲ್ಲೇ ಸಂಚಾರ ಮಾಡುತ್ತಾರೆ. ನಿತ್ಯವೂ ಹೆಚ್ಚು ಜನಸಂದಣಿಯಿಂದ ಕೂಡಿರುವ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿಯೇ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿ.ರಾಚಯ್ಯ ಜೋಡಿ ರಸ್ತೆ ವಿಭಜಕದ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೀದಿ ದೀಪವನ್ನೇ ಕಾಣದ ಕಂಬಗಳು:
ನಗರದ ಜೋಡಿ ರಸ್ತೆಯಲ್ಲಿ ಬೀದಿದೀಪಗಳ ಸಮಸ್ಯೆಯಾದರೆ, ಇನ್ನು ಕೆಲವು ರಸ್ತೆಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಿಗೆ ದೀಪಗಳನ್ನೇ ಅಳವಡಿಸಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ರಸ್ತೆ, ಸಂತೇಮರಹಳ್ಳಿ ವೃತ್ತದಿಂದ ರೇಷ್ಮೆ ಮಾರುಕಟ್ಟೆವರೆಗಿನ ರಾಷ್ಟ್ರೀಯ ಹೆದ್ದಾರಿ, ಗಾಳಿಪುರ ಬಡಾವಣೆಗೆ ಸಾಗುವ ರಸ್ತೆ, ನ್ಯಾಯಾಲಯ ರಸ್ತೆ, ಕುಲುಮೆ ರಸ್ತೆ ಹಾಗೂ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ನಗರಸಭೆ ವತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ಬೀದಿದೀಪ ಅಳವಡಿಸಲು ನೂರಾರು ಕಂಬಗಳನ್ನು ನೆಟ್ಟಿದ್ದು, ಸಾಕಷ್ಟು ವರ್ಷಗಳಿಂದ ಈ ಕಂಬಗಳಿಗೆ ದೀಪಗಳನ್ನು ಅಳವಡಿಸಿಲ್ಲ. ಈಗಾಗಲೇ ಹಲವು ಕಂಬಗಳು ಬೀಳುವ ಸ್ಥಿತಿಗೆ ಬಂದಿದ್ದು, ಹಲವು ಕಡೆಗಳಲ್ಲಿ ಶಿಥಿಲಾವಸ್ಥೆಗೆ ತಲುಪಿವೆ. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬಡಾವಣೆಗಳಲ್ಲೂ ಇದೇ ಗೋಳು:
ನಗರಸಭೆ ವ್ಯಾಪ್ತಿಯಲ್ಲಿನ ಹಲವಾರು ಬಡಾವಣೆಗಳಲ್ಲೂ ಬೀದಿ ದೀಪಗಳದ್ದೇ ಸಮಸ್ಯೆ. ಬುದ್ಧನಗರ, ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ, ರಾಮಸಮುದ್ರ ಬಡಾವಣೆ, ಉಪ್ಪಾರ ಬಡಾವಣೆ, ನಾಯಕ ಸಮುದಾಯದ ಬಡಾವಣೆ ಹಾಗೂ ಇನ್ನಿತರ ಬಡಾವಣೆಗಳಲ್ಲೂ ಬೀದಿದೀಪಗಳು ಕೆಟ್ಟು ನಿಂತು ಸಾಕಷ್ಟು ತಿಂಗಳುಗಳೇ ಕಳೆದಿದ್ದರೂ ಈವರೆಗೂ ಸರಿಪಡಿಸಿಲ್ಲ. ನೂರಾರು ಬೀದಿದೀಪಗಳು ಪ್ರಕಾಶಮಾನವಾಗಿ ಬೆಳಗದೇ ನಿವಾಸಿಗಳು ಓಡಾಡುವುದಕ್ಕೂ ತೊಂದರೆಯಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕವಾದ ರಸ್ತೆಗಳೂ ಇಲ್ಲದೆ, ರಾತ್ರಿ ವೇಳೆಯಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ಇನ್ನಾದರೂ ನಗರಸಭಾ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದಲ್ಲಿರುವ ಬೀದಿದೀಪಗಳ ಸಮಸ್ಯೆಗಳನ್ನು ಬೇಗ ಬಗೆಹರಿಸಬೇಕು ಎಂದು ರಾಮಸಮುದ್ರ ನಿವಾಸಿ ಮೋಹನ್ (ನಗು) ಒತ್ತಾಯಿಸಿದ್ದಾರೆ.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಅಳವಡಿಸಿರುವ ಹೆಚ್ಚಿನ ವಿದ್ಯುತ್ ದೀಪಗಳು ಕೆಟ್ಟುನಿಂತಿವೆ. ಸಾಕಷ್ಟು ವಿದ್ಯುತ್ ದೀಪಗಳು ಸಮರ್ಪಕವಾಗಿ ಬೆಳಕು ನೀಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ನಿತ್ಯವೂ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ನಗರಸಭಾ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ.ಮೋಹನ್(ನಗು), ರಾಮಸಮುದ್ರ, ಚಾಮರಾಜನಗರ