

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸೋಮವಾರ ಉಪ್ಪಾರ ಜನಾಂಗದ ವತಿಯಿಂದ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ವಿಜೃಂಭಣೆಯಿಂದ ಸೋಮವಾರ ಆಚರಿಸಲಾಯಿತು.
ಗ್ರಾಮದಲ್ಲಿರುವ ಉಪ್ಪಾರ ಜನಾಂಗದ ಚಾವಡಿ ಮುಂಭಾಗದ ರಸ್ತೆಯಲ್ಲಿ ಅಲಂಕೃತಗೊಳಿಸಿದ ಬೆಳ್ಳಿ ರಥಕ್ಕೆ ಶ್ರೀ ಭಗೀರಥರ ಭಾವಚಿತ್ರ ಇಟ್ಟು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ಉಪ್ಪಾರ ಜನಾಂಗದ ಯಜಮಾನರು ಉತ್ಸವಕ್ಕೆ ಚಾಲನೆ ನೀಡಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಾಗಿತು. ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು ನೂರೊಂದು ಕಳಸ ಹೊತ್ತು ಸಾಗಿದರು. ಶ್ರೀರಾಮ, ಶ್ರೀ ಭಗೀರಥ, ಶ್ರೀ ಆಂಜನೇಯ, ಈಶ್ವರ ವೇಷಧಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಎಲ್ಲರನ್ನು ಆಕರ್ಷಿಸಿದರು. ಗ್ರಾಮದ ದೇವತೆಯ ಸತ್ತಿಗೆ, ಸೂರಪಾನಿ ಮೆರವಣಿಗೆ ಮೆರುಗು ನೀಡಿತು. ತಮಟೆ, ಡೊಳ್ಳು, ನಗಾರಿ, ಇಮ್ಮೆಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.
ಮೆರವಣಿಗೆ ರಸ್ತೆ ಮಾರ್ಗವನ್ನು ದೀಪಾಂಲಕಾರ ಹಾಗೂ ಹಸಿರು ತೋರಣದಿಂದ ಅಲಂಕೃತಗೊಳಿಸಲಾಗಿತ್ತು. ಈ ವೇಳೆ ಶ್ರೀ ಭಗೀರಥ ರಥಕ್ಕೆ ಮನೆ ಮನೆಯಿಂದ ನಿರೇಯರು ಹಣ್ಣು-ಕಾಯಿ ತಂದು ಪೂಜೆ ಸಲ್ಲಿಸಿದರು. ತಾಲೂಕು ಶ್ರೀ ಭಗೀರಥ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಮಾತನಾಡಿ, ಶ್ರೀ ಭಗೀರಥರ ಜಯಂತಿಯನ್ನು ಚುನಾವಣೆಯ ನೀತಿ ಸಂಹಿತೆ ರಾಜ್ಯಾದ್ಯಂತ ಸರಳವಾಗಿ ಆಚರಣೆ ಮಾಡಲಾಗಿತ್ತು. ಇದೀಗ ನಮ್ಮ ಗ್ರಾಮದ ಯಜಮಾನರು, ಮುಖಂಡರು ಸಭೆ ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದ್ದೇವೆ ಎಂದರು.
ಗ್ರಾಮದ ಉಪ್ಪಾರ ಜನಾಂಗ ದೊಡ್ಡ ಯಜಮಾನ ರಾಜೇಶ್, ಯಜಮಾನರಾದ ಸೋಮಣ್ಣ, ಶಂಬುಲಿಂಗ, ರಾಮಶೆಟ್ಟಿ, ಮಹೇಶ, ಗುಂಡು, ಸಿದ್ದರಾಜು, ಶಂಕರ್ ಮಲ್ಲಶೆಟ್ಟಿ, ಪರವಶೆಟ್ಟಿ, ಪ್ರಕಾಶ್, ಮುತ್ತುರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಶೆಟ್ಟಿ, ಸದಸ್ಯರಾದ ಮಹದೇವಮ್ಮ, ಶಶಿಕಲಾ, ಭಗೀರಥ ಸಂಘದ ಅಧ್ಯಕ್ಷ ನಾಗರಾಜು ಉಪ್ಪಾರ್, ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಸೇರಿದಂತೆ ಗ್ರಾಮಸ್ಥರು, ಕುಲಸ್ಥರು, ಶ್ರೀ ಭಗೀರಥ ಸಂಘದ ಪದಾಧಿಕಾರಿಗಳು ಇದ್ದರು.