ಗಿರಿಜನರಿಂದ ಅರ್ಜಿ ಸ್ವೀಕರಿಸಲು ಕ್ರಮವಹಿಸಿ

oppo_2
oppo_2
Published on

ಹನೂರು: ಅರಣ್ಯ ಹಕ್ಕು ಕಾಯ್ದೆಯಡಿ ಸರ್ಕಾರದಿಂದ ಆರ್‌ಟಿಸಿ ಪಡೆಯಲು ಹಾಗೂ ಸಮುದಾಯದ ಹಕ್ಕನ್ನು ಪಡೆಯುವ ಸಂಬಂಧ ಸಂಘದ ಪದಾಧಿಕಾರಿಗಳು ಮುತುವರ್ಜಿ ವಹಿಸಿ ಗಿರಿಜನರಿಂದ ಅರ್ಜಿ ಸ್ವೀಕರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಮಾದೇಗೌಡ ತಿಳಿಸಿದರು.

ಪಟ್ಟಣದ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಸೋಲಿಗರ ಅಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಗಿರಿಜನರು ಸಮುದಾಯದ ಹಕ್ಕನ್ನು ಒದಗಿಸುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆಯಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ ಅವರು ಉಪ ವಿಭಾಗಾಧಿಕಾರಿ ಹಾಗೂ ಆಯಾ ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಆದರೆ ಹೆಚ್ಚು ಸಮಸ್ಯೆ ಇರುವ ಹನೂರು ಭಾಗದಲ್ಲಿ ಕೆಲವರು ಅರ್ಜಿ ಹಾಕಿಲ್ಲ. ಈ ಬಗ್ಗೆ ನಿರಾಸಕ್ತಿ ವಹಿಸಲಾಗಿದೆ. ಇದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಈ ಸಂಬಂಧ ಸಂಘದ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಆಯಾ ಸರ್ಕಲ್ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸಿ ಜನರಿಗೆ ಮಾಹಿತಿ ತಿಳಿಸಬೇಕಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಮೂಲ ಆದಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ವಿ.ಮುತ್ತಯ್ಯ, ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಸಿದ್ದೇಗೌಡ, ಕಾರ್ಯದರ್ಶಿ ರಂಗೇಗೌಡ, ಮ.ಬೆಟ್ಟ ಕ್ಷೇತ್ರ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಗಿರಿಯಾ, ಗುಂಡಾಲ್‌ನ ಕೇತೇಗೌಡ, ಪೊನ್ನಾಚಿಯ ಭದ್ರಪ್ಪ, ಹುತ್ತೂರಿನ ನಾಗಣ್ಣ, ಪಿ.ಜಿ.ಪಾಳ್ಯದ ಪೇರಿಸ್ವಾಮಿ, ನಕ್ಕುಂದಿಯ ರಂಗೇಗೌಡ, ಮುಂಖಡರಾದ ಪಡಗಲ, ಭೈರ, ವೀರಣ್ಣ, ಮುತ್ತೇಗೌಡ, ನಾಗರಾಜು, ಮಾದಯ್ಯ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net