ಮರಿಯಾಲ ಮಠಕ್ಕೆ ಎನ್‌ಡಿಎ ಅಭ್ಯರ್ಥಿ ಭೇಟಿ

27rajesh6
Published on

ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಮರಿಯಾಲದ ಮಠಕ್ಕೆ ಸೋಮವಾರ ಭೇಟಿ ನೀಡಿ, ಶ್ರೀಮಠದ ಅಧ್ಯಕ್ಷ ಶ್ರೀಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳಿಂದ ಆಶೀರ್ವಾದ ಪಡೆದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕೆ.ವಿವೇಕಾನಂದ ಅವರು ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ನನಗೆ ಪ್ರಥಮ ಪ್ರಾಶಸ್ತ್ಯ ಮತ ನೀಡುವಂತೆ ಮನವಿ ಮಾಡಿದರು.

ಇದಕ್ಕು ಮುನ್ನಾ ಶ್ರೀಮಠದಲ್ಲಿರುವ ಹಿರಿಯ ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಆಶೀರ್ವಾದ ಪಡೆದು ನಿಮ್ಮ ಬಳಿಗೆ ಬಂದಿದ್ದೇನೆ. ಶಿಕ್ಷಕರ ಶ್ರೇಯೋಭಿವೃದ್ದಿಗೆ ದುಡಿಯವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗೆ ನಾಲ್ಕು ಬಾರಿ ಅವಕಾಶ ಕೊಟ್ಟಿದ್ದೀರಿ. ನನಗೊಂದು ಬಾರಿ ಅವಕಾಶ ನೀಡಿ, ನಿಮ್ಮೆಲ್ಲರ ಸೇವಕನಾಗಿ ದುಡಿಯುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ನಿರಂಜನ್ ಮೂರ್ತಿ, ಡಾ.ಎ.ಆರ್. ಬಾಬು, ಜೆಡಿಎಸ್ ಮುಖಂಡ ಆಲೂರು ಮಲ್ಲು, ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಉಪನ್ಯಾಸಕ ಆಶೋಕ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net