ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ

27rajesh3
Published on

ಚಾಮರಾಜನಗರ: ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಎಸ್.ಚಂದ್ರಮ್ಮ ಸಲಹೆ ನೀಡಿದರು.

ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪದವಿಯಲ್ಲಿಮೂರು ವರ್ಷಗಳ ತನಕ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿದರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಾಗಿ ಮೊಬೈಲ್‌ಗೆ ಸಮಯವನ್ನು ಮೀಸಲಿಡುತ್ತಿದ್ದಾರೆ. ಅದನ್ನು ಕಡಿಮೆ ಮಾಡಿ ಪುಸ್ತಕದ ಕಡೆ ಹೆಚ್ಚಿನ ಗಮನಹರಿಸಬೇಕು. ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸುಗಳಿಸಬಹುದಾಗಿದೆ ಎಂದು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪಿ.ಬಾಲಸುಬ್ರಹ್ಮಣ್ಯ ಮಾತನಾಡಿ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜತೆಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಸುಮತಿ, ಚಾಮರಾಜನಗರ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಆರ್.ಮಹೇಶ್, ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಡಾ.ಎಂ.ಸಿ.ಪ್ರಭಾವತಿ, ಕ್ರೀಡಾ ಸಮಿತಿ ಸಂಚಾಲಕ ಡಾ.ಶಾಂತರಾಜು, ರೆಡ್ ಕ್ರಾಸ್ ಸಮಿತಿ ಸಂಚಾಲಕ ಸಿದ್ದರಾಜು, ಸ್ಕೌಟ್ಸ್ ಮತ್ತು ಗೈಡ್ಸ್
ಸಂಚಾಲಕಿ ರುಕ್ಮಿಣಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕಿ ಎಸ್.ಆರ್.ದೀಪ, ಉಪನ್ಯಾಸಕ ಜಯಣ್ಣ, ಕುಸುಮ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net