

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಅರಿಶಿಣ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದ್ದು, ಬಿತ್ತನೆ ಅರಿಶಿಣ ಖರೀದಿಯಲ್ಲಿ ರೈತರು ಜಾಗೃತಿ ವಹಿಸುವ ಅಗತ್ಯವಿದೆ.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಈಗಾಗಲೇ ಒಟ್ಟು 2800 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿಣವನ್ನು ಬಿತ್ತನೆ ಮಾಡಲಾಗಿದೆ. ಅದಾಗ್ಯೂ ಸಾಕಷ್ಟು ರೈತರು ಅರಿಶಿಣಕ್ಕೆ ಉತ್ತಮವಾದ ಬೆಲೆ ಇರುವುದರಿಂದ ಬಿತ್ತನೆ ಅರಿಶಿಣವನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಈಗಾಗಲೇ ಅರಿಶಿಣ ಬೆಳೆದಿರುವ ರೈತರು, ತಮ್ಮ ಜಮೀನಿನಲ್ಲೇ ಬೆಳೆದ ಅರಿಶಿಣವನ್ನು ಬಿತ್ತನೆ ಮಾಡುತ್ತಿದ್ದಾರೆ. ಹೆಚ್ಚು ಬೇಡಿಕೆ ಇರುವುದರಿಂದ ಹೊರಗೆ ಖರೀದಿ ಮಾಡುತ್ತಿದ್ದಾರೆ.
ರೈತರಿಂದಲೇ ಅರಿಶಿಣವನ್ನು ಖರೀದಿಸಿ, ಹೆಚ್ಚು ಬೆಲೆ ಇರುವ ಸಂದರ್ಭದಲ್ಲಿ ರೈತರಿಗೆ ಮಾರಾಟ ಮಾಡುವಾಗ ಗುಣಮಟ್ಟದ ಬಿತ್ತನೆ ಅರಿಶಿಣ ದೊರೆಯುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ರೈತ ಉತ್ಪಾದನಾ ಸಂಸ್ಥೆಗಳು ಉತ್ತಮವಾದ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದೆ. ಆದರೆ ಕೆಲವು ರೈತರು ಬೇರೆ ಕಡೆಗಳಿಂದ ಅರಿಶಿಣ ಖರೀದಿಸಿ, ರೋಗ ಬರುವುದು, ಇಳುವರಿ ಕುಂಠತವಾಗುವುದು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿತ್ತನೆ ಅರಿಶಿಣ ಖರೀದಿಯಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು, ಅಧಿಕಾರಿಗಳು, ಕೃಷಿ ವಿಜ್ಞಾನಿ, ರೈತ ಮುಖಂಡರು ಹಾಗೂ ಅರಿಶಿಣ ಬೆಳೆಗಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಬೆಳೆಯನ್ನು ನೋಡಿ ಖರೀದಿಸಬೇಕು
ರೈತರು ಉತ್ತಮವಾದ ಅರಿಶಿನ ಬೆಳೆ ಇರುವ ತೋಟಗಳನ್ನು ನೋಡಿ, ಸಲು ಕೀಳುವ ಸಂದರ್ಭದಲ್ಲಿ ಬಿತ್ತನೆ ಖರೀದಿ ಮಾಡಿದರೆ ಅನುಕೂಲವಾಗುತ್ತದೆ. ಬಿತ್ತನೆ ಬೀಜ ಎಲ್ಲಿ, ಹೇಗಿದೆ, ಎಷ್ಟು ಇಳುವರಿ ಬರುತ್ತದೆ ಎಂಬುದು ಗೊತ್ತಿರುವುದಿಲ್ಲ. ಆ ಮಾಹಿತಿ ಇಲ್ಲದೇ ಖರೀದಿಮಾಡಿ ಬಿತ್ತನೆ ಮಾಡಿದರೆ ಅದು ಉತ್ಪಾದನೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಇಳುವರಿ ಕುಂಠಿತವಾಗಿ, ರೋಗಗಳು ಬರುವ ಸಾಧ್ಯತೆಯೂ ಇರುತ್ತದೆ. ಈ ನಿಟ್ಟಿನಲ್ಲಿ ರೈತರು ರೋಗರಹಿತವಾದ ಅರಿಶಿಣವನ್ನು ಖರೀದಿ ಮಾಡಬೇಕು. ರೈತನಿಗೆ ಅವಶ್ಯಕತೆ ಹೆಚ್ಚಾದಾಗ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ರೈತರು ಬುದ್ಧಿವಂತಿಕೆಯಿಂದ ಬಿತ್ತನೆ ಅರಿಶಿಣವನ್ನು ಖರೀದಿ ಮಾಡಬೇಕು.ಪ್ರಸ್ತುತ ಬಿತ್ತನೆ ಅರಿಶಿಣಕ್ಕೆ 5-6 ಸಾವಿರ ರೂ. ಇದೆ. ಈ ನಿಟ್ಟಿನಲ್ಲಿ ರೈತರು ಬಂಡವಾಳ ಹೂಡುವಾಗ ಜಾಗೃತಿ ವಹಿಸಬೇಕಿದೆ.
ನಾಗಾರ್ಜುನ್, ಅರಿಶಿಣ ಬೆಳೆಗಾರ ಮತ್ತು ರೈತಮುಖಂಡ, ಗುಂಡ್ಲುಪೇಟೆ
ಅಧಿಕಾರಿಗಳ ನಿರ್ಲಕ್ಷ್ಯ
ಕೇಂದ್ರ ಸರ್ಕಾರ ಒಂದು ಉತ್ಪನ್ನ, ಒಂದು ಜಿಲ್ಲೆಯಡಿಯಲ್ಲಿ ಅರಿಶಿಣ ಬೆಳೆಯನ್ನು ಗುರುತುಮಾಡಲಾಗಿದೆ. ಆದರೆ ಗುಣಮಟ್ಟದ ಅರಿಶಿಣ ಬಿತ್ತನೆಯನ್ನು ರೈತರಿಗೆ ಪೂರೈಕೆ ಮಾಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗುಂಡ್ಲುಪೇಟೆಯ ತೆರಕಣಾಂಬಿ ಮತ್ತು ಇನ್ನಿತರೆ ಸಂತೆಗಳಲ್ಲಿ ತಮಿಳುನಾಡಿನ ಮೂಲದವರು ಬಿತ್ತನೆ ಅರಿಶಿಣವನ್ನು ಮಾರಾಟ ಮಾಡುತ್ತಾರೆ. ಆ ಅರಿಶಿಣ ರೈತರ ಜಮೀನಿಗೆ ಯೋಗ್ಯವಾಗಿದೆಯೋ ಎಂದು ಪರಿಶೀಲನೆ ಮಾಡದೇ, ಬಿತ್ತನೆ ಮಾಡುವುದರಿಂದ ಸಾಕಷ್ಟು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಲ್ಲಿ ಗುಣಮಟ್ಟದ ಬಿತ್ತನೆ ಅರಿಶಿಣವನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು.
ಹೊನ್ನೂರು ಪ್ರಕಾಶ್, ರೈತಮುಖಂಡ, ಚಾಮರಾಜನಗರ
ನಾವೇ ಬೆಳೆದ ಅರಿಶಿಣವೇ ಯೋಗ್ಯ
ರೈತರ ಜಮೀನಿನಲ್ಲಿ ಇರುವ ಮಣ್ಣಿನ ಗುಣಮಟ್ಟದ ಆಧಾರದಲ್ಲಿ ಅರಿಶಿಣ ಉತ್ತಮ ಇಳುವರಿ ಬರುತ್ತದೆ. ಮಣ್ಣು ಯೋಗ್ಯವಾಗಿ ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ. ಬಿತ್ತನೆ ಅರಿಶಿಣ ಖರೀದಿಯ ಸಂದರ್ಭದಲ್ಲಿ ಜಾಗೃತಿ ಅಗತ್ಯವಾಗುತ್ತದೆ. ಬಿತ್ತನೆ ಅರಿಶಿಣಕ್ಕೆ ಹೆಚ್ಚು ಬೆಲೆ ಇದೆ ಎಂಬ ಕಾರಣಕ್ಕೆ ತಕ್ಷಣಕ್ಕೆ ಕಿತ್ತು ತಂದಿರುವ ಅರಿಶಿಣವನ್ನು ಬಿತ್ತನೆ ಮಾಡಬಾರದು. ಇದರಿಂದ ಅರಿಶಿಣ ಕೊಳೆತುಹೋಗುತ್ತದೆ. ಕಳೆದ 5 ವರ್ಷಗಳಿಂದ ನಮ್ಮದೇ ಜಮೀನಿನಲ್ಲಿ ಬೆಳೆಯುತ್ತಿರುವ ಅರಿಶಿಣವನ್ನು ಬಿತ್ತನೆ ಮಾಡುತ್ತಿರುವುದರಿಂದ ಇಳುವರಿ ಚೆನ್ನಾಗಿ ಬರುತ್ತಿದೆ. ಈ ನಿಟ್ಟಿನಲ್ಲಿ ರೈತರು ಖರೀದಿಯಲ್ಲಿ ಜಾಗೃತಿವಹಿಸಬೇಕಿದೆ.
ಮಹೇಶ್, ಅರಿಶಿಣ ಬೆಳೆಗಾರ, ದಡದಹಳ್ಳಿ, ಚಾಮರಾಜನಗರ
ಗುಣಮಟ್ಟದ ಅರಿಶಿಣಕ್ಕೆ ಆದ್ಯತೆ ನೀಡಿ
ಜಿಲ್ಲೆಯಲ್ಲಿ ಉತ್ತಮವಾಗಿ ಅರಿಶಿಣ ಬೆಳೆದಿರುವ ರೈತರ ಬಳಿ ಬಿತ್ತನೆ ಅರಿಶಿಣವನ್ನು ಖರೀದಿ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಅರಿಶಿಣದ ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಹಾಗೂ ಬಿತ್ತನೆ ಅರಿಶಿಣ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಬೇರೆ ಕಡೆಗಳಿಂದ ಬಿತ್ತನೆ ಅರಿಶಿಣ ಖರೀದಿ ಮಾಡುವುದರಿಂದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಪ್ರಸ್ತುತ ರೈತ ಉತ್ಪಾದನಾ ಸಂಸ್ಥೆಗಳಿಂದ ಬಿತ್ತನೆ ಅರಿಶಿಣವನ್ನು ವಿತರಣೆ ಮಾಡಲಾಗುತ್ತಿದೆ. ಆ ಗುಣಮಟ್ಟದ ಅರಿಶಿಣವನ್ನು ಖರೀದಿ ಮಾಡುವ ಮೂಲಕ ರೈತರು ಬಿತ್ತನೆ ಮಾಡಬೇಕು. ಜಮೀನಿನ ಮಣ್ಣು, ಗೊಬ್ಬರ ಬಳಕೆಯಲ್ಲೂ ಸಾಕಷ್ಟು ನಿಯಮಗಳನ್ನು ಅನುಸರಿಸಿದರೆ, ಉತ್ತಮ ಇಳುವರಿ ಸಾಧ್ಯವಾಗುತ್ತದೆ.
ಹೊನ್ನೂರು ಬಸವಣ್ಣ, ರೈತಮುಖಂಡ, ಸಂತೇಮರಹಳ್ಳಿ
ರೈತ ಉತ್ಪಾದಕ ಸಂಸ್ಥೆಗಳಿಂದ ಉತ್ತಮ ಬೀಜ ವಿತರಣೆ
ಜಿಲ್ಲೆಯಲ್ಲಿ ವಿಶೇಷವಾಗಿ ಚಾಮರಾಜನಗರ ತಾಲೂಕಿನ ಅಂಕನಶೆಟ್ಟಿಪುರದಲ್ಲಿರುವ ಸೌಹಾರ್ದ ರೈತ ಉತ್ಪಾದಕರ ಸಂಸ್ಥೆ, ಉಡಿಗಾಲ ರೈತ ಉತ್ಪಾದಕರ ಸಂಸ್ಥೆ ಹಾಗೂ ಕೊಳ್ಳೇಗಾಲ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯಲ್ಲಿ ಅರಿಶಿಣ ಬೀಜ ಬೆಳೆಗಾರ ರೈತರು ಇದ್ದಾರೆ. ಅವರು ಹೆಚ್ಚಿನ ರೈತರಿಗೆ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಗುಂಡ್ಲುಪೇಟೆ ಮತ್ತು ಚಾಮರಾಜನಗರದ 2 ಕಂಪನಿ ಇವರಿಂದ ಖರೀದಿ ಮಾಡುತ್ತಿದ್ದಾರೆ. ನೋಂದಾಯಿತ ಅರಿಶಿಣ ಬೆಳೆಗಾರ ರೈತರನ್ನು ಹೊರತುಪಡಿಸಿ, ಉತ್ತಮವಾದ ಬಿತ್ತನೆ ಬೀಜ ಬಯಸುವ ರೈತರು ತಾಲೂಕಿನ ಹರದನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಅದಲ್ಲದೇ ರೋಗ ನಿರ್ವಹಣೆ ಹಾಗೂ ಗೊಬ್ಬರ ಬಳಕೆ ಸಂಬಂಧ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಡಾ.ಜಿ.ಎಸ್.ಯೋಗೇಶ್, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹರದನಹಳ್ಳಿ ಾರಂ, ಚಾಮರಾಜನಗರ
ನಿರ್ವಹಣೆಯೇ ಸವಾಲು
ಜಮೀನಿನಲ್ಲಿ ಇರುವ ಮಣ್ಣಿನ ಗುಣಕ್ಕೆ ತಕ್ಕಂತೆ ಅರಿಶಿಣ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ. ಗೊಬ್ಬರ ನಿರ್ವಹಣೆ ಹಾಗೂ ವ್ಯವಸಾಯ ನಿಯಮಾನುಸಾರವಾಗಿ ಇರಬೇಕಾಗುತ್ತದೆ. ಬಿತ್ತನೆ ಅರಿಶಿಣ ಮಾರಾಟ ಮಾಡುವವರು ನಮ್ಮಿಂದಲೇ ಅರಿಶಿಣವನ್ನು ಖರೀದಿ ಮಾಡಿರುತ್ತಾರೆ. ಬೆಲೆ ಬಂದಾಗ ಮಾರಾಟ ಮಾಡುವುದರಿಂದ ಅದರಲ್ಲಿ ಗುಣಮಟ್ಟ ಬಯಸಲು ಸಾಧ್ಯವೆ. ಆಗಾಗಿ ಹೊಸದಾಗಿ ಅರಿಶಿಣ ಬೆಳೆಯುವ ರೈತರು ಈಗಾಗಲೇ ಅರಿಶಿಣ ಬೆಳೆದಿರುವ ರೈತರ ಜಮೀನಿನಲ್ಲಿ ಖರೀದಿ ಮಾಡಿದರೆ ಅನುಕೂಲವಾಗುತ್ತದೆ.
ಶೀಲಾ, ಕೆಂಪನಪಾಳ್ಯ, ರೈತ ಮಹಿಳೆ, ಕೊಳ್ಳೇಗಾಲ
ಗುಣಮಟ್ಟವಿಲ್ಲದೇ ಸಮಸ್ಯೆ
ಅರಿಶಿಣವನ್ನು ಬೆಳೆದು ಮಾರಾಟ ಮಾಡಿದಾಗ ಒಮ್ಮೆಯೇ ಹಣ ಕೈಸೇರುತ್ತದೆ ಎಂಬ ಕಾರಣಕ್ಕೆ ಅರಿಶಿಣ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ ಬೇಡಿಕೆ ಹೆಚ್ಚಿದಂತೆ ಬಿತ್ತನೆ ಅರಿಶಿಣವನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ರೈತರು ಉತ್ತಮ ಗುಣಮಟ್ಟದ ಅರಿಶಿಣವನ್ನು ಖರೀದಿಸದ ಕಾರಣಕ್ಕೆ ಸಂಕಷ್ಟ ಅನುಭವಿಸಿರುವ ಉದಾಹರಣೆ ಇದೆ. ಇಳುವರಿ ಕುಂಠಿತವಾಗುವುದು, ರೋಗ ಬರುವುದು ಇತ್ಯಾದಿ ಸಮಸ್ಯೆಗಳು ತಲೆದೋರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಗುಣಮಟ್ಟದ ಬಿತ್ತನೆ ಅರಿಶಿಣವನ್ನು ರೈತರಿಗೆ ತಲುಪಿಸಲು ಮುಂದಾಗಬೇಕು.
ಸೊಸೈಮೆರಿ, ರೈತ ಮಹಿಳೆ, ಶಾಂತಿ ನಗರ