ಸತತ ಮಳೆ ತರುತ್ತಿದೆ ಸಂಕಷ್ಟ

25rajesh6
Published on

ಚಾಮರಾಜನಗರ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿಮಳೆ ಒಂದಿಲ್ಲೊಂದು ಸಮಸ್ಯೆಗಳನ್ನು ತಂದೊಡ್ಡುತ್ತಿದ್ದು, ಶುಕ್ರವಾರ ರಾತ್ರಿ ವಿವಿಧ ಕಡೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಯಿತು.

ಜಿಲ್ಲೆಯ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಆರಂಭವಾದ ಮಳೆ ರಾತ್ರಿಯಿಡೀ ಸುರಿಯಿತು. ಪರಿಣಾಮವಾಗಿ ಹಲವು ಕಡೆಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರು ಪರದಾಡುವಂತಾಯಿತು. ನಗರದ ಹೊಸ ಕೆಎಚ್‌ಬಿ ಕಾಲೋನಿ ತಗ್ಗು ಪ್ರದೇಶದಲ್ಲಿ ಇರುವುದರಿಂದ ಬಡಾವಣೆಗೆ ಹೆಚ್ಚಿನ ಮಳೆ ನೀರು ನುಗ್ಗಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿತು. ಅದಲ್ಲದೇ ಇನ್ನಿತರೆ ತಗ್ಗು ಪ್ರದೇಶಗಳಿಗೆ ಮಳೆ ಮತ್ತು ಚರಂಡಿನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಯಿತು.

ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿತು. ಗ್ರಾಮದ ರತ್ನಮ್ಮ ಹಾಗೂ ಚಾಮಲಮ್ಮ ಎಂಬುವವರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಈ ಕುಟುಂಬಗಳು ರಾತ್ರಿಯಿಡೀ ಜಾಗರಣೆ ಮಾಡಿದರು. ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿದ್ದು, ರಾತ್ರಿಯಿಡೀ ಮಳೆ ನೀರನ್ನು ಹೊರಹಾಕಲು ಜನರು ಹರಸಾಹಸಪಟ್ಟರು. ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ಇಲ್ಲದೇ ಇರುವುದರಿಂದ ಜೋರು ಮಳೆ ಬಂದಾಗಲೆಲ್ಲ ರಸ್ತೆ ಮೇಲೆ ನೀರು ಹರಿದು ಮನೆಗಳಿಗೆ ನೀರು ನುಗ್ಗುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಗಮನಹರಿಸಿ ಸೂಕ್ತ ಚರಂಡಿ, ರಸ್ತೆ ನಿರ್ಮಾಣ ಮಾಡಿಕೊಡುವಂತೆ ನಿವಾಸಿಗಳು ಆಗ್ರಹಿಸಿದರು. ವಿಷಯ ತಿಳಿದು ಸ್ಥಳಕ್ಕೆ ಗ್ರಾಮಲೆಕ್ಕಿಗರಾದ ಯಮುನಾ, ಗ್ರಾ.ಪಂ ಸದಸ್ಯ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ನಗರದಲ್ಲಿ ಶನಿವಾರವೂ ಮುಂಜಾನೆಯಿಂದ ಮೋಡ ಕವಿದ ವಾತಾವರಣ ಇತ್ತು. ಅಲ್ಲಲ್ಲಿ ತುಂತುರು ಮಳೆಯಾಯಿತು.

ಪ್ರಮುಖ ರಸ್ತೆಗಳಲ್ಲಿ ಮಳೆನೀರು:
ನಗರದಲ್ಲಿ ಶುಕ್ರವಾರ ಸುಮಾರು 1 ತಾಸಿಗಿಂತಲೂ ಹೆಚ್ಚುಕಾಲ ಸುರಿದ ಭಾರಿಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು. ಬಿ.ರಾಚಯ್ಯ ಜೋಡಿರಸ್ತೆ, ಸಂತೇಮರಹಳ್ಳಿ ವೃತ್ತ, ಎಲ್‌ಐಸಿ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿಬೀದಿ ರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಮಳೆ ಮತ್ತು ಚರಂಡಿ ನೀರು ಹರಿದು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ವಿವಿಧ ರಸ್ತೆಗಳು ಕೆಸರುಮಯವಾಗಿ ಮಾರ್ಪಾಡು ಹೊಂದಿದ್ದು, ರಸ್ತೆಯಲ್ಲಿಯೇ ಕೆರೆಯಂತೆ ನೀರು ನಿಂತಿತ್ತು. ಗುಂಡ್ಲುಪೇಟೆ ರಸ್ತೆ ಭಾರಿ ಮಳೆಯಿಂದಾಗಿ ನೀರು ಹರಿದು ಕೆಸರುಮಯವಾಗಿತ್ತು. ಈ ರಸ್ತೆಯಲ್ಲಿ ಬೆಳಿಗ್ಗೆಯೂ ವಾಹನ ಸವಾರರು ಸಂಚರಿಸಲು ಅರಸಾಹಸ ಪಡುತ್ತಿದ್ದರು. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲೂ ಮಳೆ ನೀರು ಹರಿದ ಪರಿಣಾಮವಾಗಿ ಕೆಲವು ಕಡೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗುಂಡಿಮಯವಾಗಿದ್ದ ಕೆಲವು ಗ್ರಾಮೀಣ ಭಾಗದ ರಸ್ತೆಗಳಲ್ಲಿ ನೀರು ನಿಂತು ವಾಹನಸವಾರರು ತೊಂದರೆ ಅನುಭವಿಸುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net