ಮ.ಬೆಟ್ಟ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು

Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ-ತಾಳುಬೆಟ್ಟ ಮಾರ್ಗದಲ್ಲಿ ಸುರಿದ ಮಳೆಯಿಂದಾಗಿ ಬುಧವಾರ ರಾತ್ರಿ ಒಣಗಿ ನಿಂತಿದ್ದ ಬೃಹತ್ ಬಿದಿರು ಹಾಗೂ ಸಣ್ಣ ಕಲ್ಲು ಬಂಡೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.

ಮ.ಬೆಟ್ಟ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ತಾಳುಬೆಟ್ಟದ ಮಾರ್ಗಮಧ್ಯೆ ರಾತ್ರಿ ಸುಮಾರು 11.30ರಲ್ಲಿ ರಸ್ತೆ ಬದಿ ಒಣಗಿ ನಿಂತಿದ್ದ ಬಿದಿರು ಬುಡಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಒಂದು ವಾಹನ ಚಲಿಸುವಷ್ಟು ಮಾತ್ರಕ್ಕೆ ಬಿದಿರನ್ನು ತೆರವುಗೊಳಿಸಿದ್ದು, ಇನ್ನುಳಿದ ಬಿದಿರನ್ನು ರಸ್ತೆಯಲ್ಲೇ ಬಿಡಲಾಗಿದೆ. ಇನ್ನು ಮಾರ್ಗದ ಅಲ್ಲಲ್ಲಿ ಸಣ್ಣ ಕಲ್ಲು ಬಂಡೆಗಳು ಬೆಟ್ಟದ ಮೇಲಿಂದ ರಸ್ತೆಗೆ ಉರುಳಿ ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ರಾತ್ರಿ ವೇಳೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಬಿದಿರು ಹಾಗೂ ಸಣ್ಣ ಕಲ್ಲು ಬಂಡೆಗಳನ್ನು ತೆರೆವುಗೊಳಿಸುವುದರ ಮೂಲಕ ಸುಗಮ
ಸಂಚಾರಕ್ಕೆ ಅನುಕೂಲ ಕಲ್ಲಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬಿದಿರನ್ನು ಅರ್ಧ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನುಳಿದ ಅರ್ಧ ಭಾಗವನ್ನು ಹಾಗೂ ರಸ್ತೆಯ ಅಲ್ಲಲ್ಲಿ ಬಿದ್ದಿರುವ ಸಣ್ಣ ಕಲ್ಲು ಬಂಡೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು.ಚಿನ್ನಣ್ಣ ಎಇಇ, ಪಿಡಬ್ಲುೃಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net