

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬೆಟ್ಟ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಎಮ್ಮೆಯೊಂದು ಮೃತಪಟ್ಟಿದ್ದರೆ, ಹುಲ್ಲಿನ ಮೆದೆ ಕುಸಿದು 4 ಎಮ್ಮೆಗಳು ಗಾಯಗೊಂಡಿವೆ.
ಗ್ರಾಮದ ಬಸವಣ್ಣ ಅವರು 4 ಹಸುಗಳು ಹಾಗೂ 5 ಎಮ್ಮೆಗಳನ್ನು ಸಾಕಿದ್ದು, ಮನೆಯ ಮುಂಭಾಗದ ಸಮೀಪದಲ್ಲಿ ಕಟ್ಟಿದ್ದರು. ಬುಧವಾರ ರಾತ್ರಿ ಮಳೆ ಬಂದಾಗ ಸಿಡಿಲು ಬಡಿದು ಒಂದು ಎಮ್ಮೆ ಸ್ಥಳದಲ್ಲಿಯೇ ಮೃತಪಟ್ಟಿತು. ಸಮೀಪದಲ್ಲಿಯೇ ಇದ್ದ ಹುಲ್ಲಿನ ಮೆದೆ ಕುಸಿದು 4 ಎಮ್ಮೆಗಳು ಗಾಯಗೊಂಡಿವೆ. ಮೃತಪಟ್ಟ ಎಮ್ಮೆಯಿಂದ 40 ಸಾವಿರ ರೂ. ನಷ್ಟವಾಗಿದೆ. ಜತೆಗೆ 4 ಎಮ್ಮೆಗಳು ಗಾಯಗೊಂಡಿರುವುದರಿಂದ ಬಸವಣ್ಣ ಆತಂಕದಲ್ಲಿದ್ದಾರೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು ಹಾಗೂ ಗಾಯಗೊಂಡಿರುವ ಎಮ್ಮೆಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ರೈತ ಬಸವಣ್ಣ ಮನವಿ ಮಾಡಿದ್ದಾರೆ.