

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಮೆಂದಾರೆ ಗಿರಿಜನ ಕಾಲನಿಯನ್ನು ಸ್ಥಳಾಂತರಿಸುವ ಸಂಬಂಧ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಲಾಗಿದೆ.
ಕಾಲನಿಯನ್ನು ಸ್ಥಳಾಂತರದ ಸಂಬಂಧ ಅವಶ್ಯ ಮಾಹಿತಿ ಪಡೆದು, ಮನೆಗಳ ಸಮೀಕ್ಷೆ ನಡೆಸಿ ವಿಸ್ತೃತ ವರದಿ ಸಲ್ಲಿಸುವಂತೆ ಜೂ. 5 ರೊಳಗೆ ಕಚೇರಿಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದ್ದು, ಈ ಕಾರ್ಯಕ್ಕೆ 6 ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳು ಯಾರ‌್ಯಾರು?: ಸಮಿತಿಯಲ್ಲಿ ಕಂದಾಯ ಇಲಾಖೆಯಿಂದ ರಾಮಾಪುರ ಹೋಬಳಿ ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಅಡಳಿತ ಅಧಿಕಾರಿ ಎಂ. ವಿನೋದ್‌ಕುಮಾರ್, ಅರಣ್ಯ ಇಲಾಖೆಯಿಂದ ಮ.ಬೆಟ್ಟ ಉಪ ವಲಯ ಅರಣ್ಯಾಧಿಕಾರಿ ಶಿವರಾಜು, ಅರಣ್ಯ ರಕ್ಷಕ ಸಂಗಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಮ.ಬೆಟ್ಟ ಗ್ರಾ. ಪಂ ಪಿಡಿಒ ಕಿರಣ್, ಎಸ್‌ಡಿಎ ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮ.ಬೆಟ್ಟದ ಬುಡಕಟ್ಟು ಆಶ್ರಮ ಶಾಲೆಯ ಹೊಗುತ್ತಿಗೆ ಶಿಕ್ಷಕರಾದ ಸುಧಾಕರ, ಸತೀಶ್, ಭೂ ಮಾಪನ ಇಲಾಖೆಯಿಂದ ಭೂ ಮಾಪಕರಾದ ವೀರೇಶ್, ಶ್ರೀನಿವಾಸಮೂರ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೆಂದಾರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಾದೇವಿ, ಹಳೆಯೂರಿನ ಮಾದಲಾಂಬಿಕ ಅವರನ್ನು ನಿಯೋಜಿಸಲಾಗಿದೆ.
ಸೂಚನೆಗಳು: ನಿಯೋಜಿಸಲ್ಪಟ್ಟ ಸಿಬ್ಬಂದಿ ಮೇ 27 ರಿಂದ 29 ರವರೆಗೆ ಮೆಂದಾರೆ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಮನೆ-ಮನೆಗೆ ತೆರಳಿ ಸಮೀಕ್ಷೆಗೆ ನಿಗದಿಪಡಿಸಿರುವ ನಮೂನೆಯಲ್ಲಿ ಮನೆಯ ಮುಖ್ಯಸ್ಥರಿಂದ ಮಾಹಿತಿ ಪಡೆಯಬೇಕು.ವಾಸ್ತವಾಂಶವನ್ನು ಮಾತ್ರ ದಾಖಲಿಸಿ ಮನೆಯ ಮುಖ್ಯಸ್ಥರಿಂದ ಸಹಿ ಪಡೆಯಬೇಕು. ಸಮೀಕ್ಷೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಮರು ಮೌಲ್ಯಮಾಪನ ಮಾಡುವುದರಿಂದ ತಪ್ಪು ಮಾಹಿತಿಯನ್ನು ದಾಖಲು ಮಾಡುವಂತಿಲ್ಲ. ಸಮೀಕ್ಷೆಯ ಅಂಶಗಳಿಗೆ ಸಂಬಂಧಿಸಿದ ದಾಖಲೆಗಳು ಪೂರಕ ಎನಿಸಿದ್ದಲ್ಲಿ ಮನೆಯ ಮುಖ್ಯಸ್ಥರಿಂದ ಪಡೆದು ನಮೂನೆಯಲ್ಲಿ ಲಗತ್ತಿಸುವುದು. ಇಲ್ಲವಾದಲ್ಲಿ ದಾಖಲೆಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸಮೀಕ್ಷೆಗೆ ನಿಯೋಜಿಸಿದ ಸಿಬ್ಬಂದಿ ನಿಗದಿಪಡಿಸಿದ ದಿನಾಂಕದಂದು ಯಾವುದೇ ಕಾರಣಕ್ಕೂ ಗೈರಾಗುವಂತಿಲ್ಲ. ಒಂದು ವೇಳೆ ಗೈರಾದರೆ ಸಕ್ಷಮ ಪ್ರಾಧಿಕಾರಕ್ಕೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಮೇ 30 ರಂದು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ಸಮೀಕ್ಷೆಯ ಅಂಶಗಳನ್ನು ಯಾವುದೇ ಕಾರಣಕ್ಕೂ ಫೋಟೋ, ಜೆರಾಕ್ಸ್ ತೆಗೆದುಕೊಳ್ಳುವಂತಿಲ್ಲ ಹಾಗೂ ಯಾರಿಗೂ ನೀಡುವಂತಿಲ್ಲ ಎಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಬುಧವಾರ ಎಸಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಅಗತ್ಯ ಸೂಚನೆಯನ್ನು ನೀಡಲಾಗಿದೆ.