ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕೀತೆ ಆದ್ಯತೆ?

6raju1 (1)
Published on

ಚಾಮರಾಜನಗರ: ರಾಜ್ಯ ಸರ್ಕಾರದ ಮೊದಲ ಬಜೆಟ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಲಿದ್ದು, ಗಡಿಜಿಲ್ಲೆ ಚಾಮರಾಜನಗರಕ್ಕೆ ಏನೇನು ಕೊಡುಗೆಗಳು ಸಿಗಲಿವೆ ಎಂಬ ಕಾತುರ ಜಿಲ್ಲೆಯ ಜನರಲ್ಲಿದೆ.

ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕಾಗಿ ಪ್ರಣಾಳಿಕೆಯಲ್ಲಿ ೋಷಿಸಿರುವ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಹಂತದಲ್ಲೇ ಬಜೆಟ್ ಮಂಡನೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು 14ನೇ ಆಯವ್ಯಯ ಮಂಡಿಸುತ್ತಿದ್ದು ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆಯೂ ಉತ್ತಮ ಬಜೆಟ್ ಮಂಡನೆ ಮಾಡಬಹುದೆಂಬ ನಿರೀಕ್ಷೆ ಇದೆ. ಇದೇ ರೀತಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೂ ವಿಶೇಷ ಪ್ಯಾಕೇಜ್ ೋಷಣೆ ಮಾಡಬಹುದೆಂಬ ನಂಬಿಕೆ ಮನೆ ಮಾಡಿದೆ.

ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿದೆ. ಮೈಸೂರಿನಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡು 25 ವರ್ಷ ಪೂರ್ಣಗೊಂಡಿದೆ. ನೂತನ ಜಿಲ್ಲೆಯಾದಾಗ ಅಂದು ಸಿದ್ದರಾಮಯ್ಯ ಅವರೇ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ವಿಶೇಷ ಅನುದಾನ ನೀಡಿದ್ದರು. ಇದೇ ರೀತಿ ಈ ಬಾರಿಯೂ ಬಜೆಟ್‌ನಲ್ಲಿ ಚಾಮರಾಜನಗರಕ್ಕೆ ಕೊಡುಗೆ ನೀಡಬಹುದೆಂಬ ನಿರೀಕ್ಷೆಯಿದೆ.

ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆ ಕಾಣಬೇಕಾಗಿದ್ದು, ಬಜೆಟ್‌ನಲ್ಲಿ ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಸುಸಜ್ಜಿತ ಆಸ್ಪತ್ರೆಯಲ್ಲೂ ಕೊರತೆಗಳಿವೆ. ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೇರಬೇಕು. ಆರೋಗ್ಯ ವ್ಯವಸ್ಥೆ ಸುಧಾರಣೆಯಾಗಬೇಕಿದೆ. ಶಿಕ್ಷಣದ ವಿಚಾರಕ್ಕೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಹಲವು ಕಡೆಗಳಲ್ಲಿ ಕೊಠಡಿ ಸಮಸ್ಯೆಗಳಿವೆ. ಪದವಿ ಪೂರ್ವ, ಪದವಿ ಕಾಲೇಜುಗಳಿಗೂ ಇದೇ ಸಮಸ್ಯೆ ಕಾಡುತ್ತಿದೆ. ಬಿಜೆಪಿ ಸರ್ಕಾರ ಕಳೆದ ಸಲ ಚಾಮರಾಜನಗರ ವಿವಿಯನ್ನು ೋಷಣೆ ಮಾಡಿತು. ಈ ವಿವಿಯಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರನ್ನು ಕಾಯಂ ಮಾಡಿಲ್ಲ.

ಇನ್ನು ಕೈಗಾರಿಕಾ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯಮಗಳು ಸ್ಥಾಪನೆಯಾಗಿಲ್ಲ. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ರೈತರಿಂದ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಹೀಗೆ ಭೂಮಿಯನ್ನು ಸ್ಥಾಪಿಸುವುದಕ್ಕಷ್ಟೇ ಸೀಮಿತಗೊಳಿಸದೆ ಉದ್ಯಮಗಳು ಸ್ಥಾಪನೆಯಾಗಬೇಕು. ಕಾರ್ಖಾನೆಗಳು ಬರಬೇಕಿದೆ. ಉದ್ಯಮಗಳ ವಿದ್ಯುತ್ ದರ ಕಡಿಮೆ ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವಂತಹ ಯೋಜನೆಯನ್ನು ಜಾರಿಗೊಳಿಸಬೇಕಿದೆ. ಜಿಲ್ಲೆಯ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಅನುಗುಣವಾಗಿ ಸೌಲಭ್ಯಗಳನ್ನು ನೀಡಬೇಕು. ಮಾರುಕಟ್ಟೆ ವ್ಯವಸ್ಥೆ ಬಲಪಡಿಸುವುದು, ಸಿರಿಧಾನ್ಯ ಬೆಳೆಯುವ ರೈತರಿಗೆ ಮತ್ತಷ್ಟು ಪ್ರೋತ್ಸಾಹ, ಸಾವಯವ ಮಾರುಕಟ್ಟೆ ತೆರೆಯಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.

ಬಜೆಟ್‌ನಲ್ಲಿದೆ ಶಾಸಕರ ಗೌರವ: ಈ ಸಲ ಮಂಡನೆಯಾಗುವ ಬಜೆಟ್‌ನಲ್ಲಿ ಜಿಲ್ಲೆಯ ಕಾಂಗ್ರೆಸ್ ಗೌರವ ಅಡಗಿದೆ. ಒಟ್ಟು 4 ಕ್ಷೇತ್ರಗಳಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ಗೆ ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ಆದರೂ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ನಾಲ್ಕು ಬಾರಿ ಗೆದ್ದಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನವೂ ಕೈ ತಪ್ಪಿತು. ಇವರಿಗೆ ಒಲ್ಲದ ಹುದ್ದೆಯಾಗಿದ್ದ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಲು ನಿರ್ಧರಿಸಲಾಗಿತ್ತು. ಕೊನೆಗೆ ಸಿ.ಪುಟ್ಟರಂಗಶೆಟ್ಟಿ ಅವರಿಗಿದ್ದ ನಿರಾಸಕ್ತಿಯನ್ನು ಗಮನಿಸಿ ತೀರ್ಮಾನವನ್ನು ಕೈಬಿಡಲಾಯಿತು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿಗೂ ಸಚಿವಗಿರಿ ಸಿಕ್ಕಿಲ್ಲ. ಹೀಗಾಗಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಾದರೂ ವಿಶೇಷ ಕೊಡುಗೆ ನೀಡಿದರೆ ಶಾಸಕರಿಗೆ ಸಮಾಧಾನ ಎನಿಸಲಿದೆ.

ಹನೂರಿಗೆ ಸಿಗುವ ಕೊಡುಗೆ ಏನು?
ತಮಿಳುನಾಡು ಗಡಿಯಲ್ಲಿರುವ, ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕಾಗಿರುವ ಹನೂರಿಗೆ ಬಜೆಟ್‌ನಲ್ಲಿ ಸಿಗುವ ಕೊಡುಗೆ ಏನು?
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹನೂರನ್ನು ತಾತ್ಸಾರದಿಂದ ಕಾಣಬಾರದು ಎನ್ನುವುದು ಜನತೆಯ ಮನವಿ. ತಾಲೂಕು ಆಸ್ಪತ್ರೆ, ಡಯಾಲಿಸಿಸ್ ಘಟಕ, ಉತ್ತಮ ರಸ್ತೆ ಸೇರಿದಂತೆ ಮೂಲಸೌಕರ್ಯಗಳಿಲ್ಲದ ಹನೂರು ಇಂದಿಗೂ ದೊಡ್ಡ ಹಳ್ಳಿಯಂತಿದೆ. ಇಲ್ಲಿನ ಜನರ ಆರೋಗ್ಯ ಹದಗೆಟ್ಟರೆ ಪಕ್ಕದ ತಮಿಳುನಾಡಿಗೆ ಅಥವಾ ದೂರದಲ್ಲಿರುವ ಚಾಮರಾಜನಗರಕ್ಕೆ ಬರಬೇಕು. ಶಿಕ್ಷಣ ವ್ಯವಸ್ಥೆ ಸುಧಾರಣೆ ಕಂಡಿಲ್ಲ. ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಮಲೈ ಮಹದೇಶ್ವರ ಬೆಟ್ಟ ಇಲ್ಲಿ ಇರುವುದಕ್ಕೆ ಹನೂರು ಖ್ಯಾತಿ ಪಡೆದುಕೊಂಡಿದೆ. ದೇಗುಲಕ್ಕೆ ಭಕ್ತರಿಂದ ಕೋಟ್ಯಂತರ ರೂ. ಕಾಣಿಕೆ ಹರಿದುಬರುತ್ತಿದ್ದರೂ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಸುತ್ತಮುತ್ತಲಿನ ಗ್ರಾಮಗಳು ಅಭಿವೃದ್ಧಿಯಾಗಿಲ್ಲ. ಬಜೆಟ್‌ನಲ್ಲಿ ಹನೂರಿಗೆ ವಿಶೇಷ ಕೊಡುಗೆ ನೀಡಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪಕ್ಕದ ಜಿಲ್ಲೆಯವರು. ಚಾಮರಾಜನಗರದ ಮೇಲೆ ವಿಶೇಷ ಕಾಳಜಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ.ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net