ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಮಳೆ

20rajesh7
Published on

ಚಾಮರಾಜನಗರ: ಜಿಲ್ಲೆಯ ವಿವಿದೆಡೆ ಸೋಮವಾರ ಭರ್ಜರಿ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕೆರೆಕಟ್ಟೆಗಳು ತುಂಬಿದವು.

ನಗರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಹಾಗೂ ಸಂಜೆಯ ಬಳಿಕ ಸುರಿದ ಜಿಟಿಜಿಟಿ ಮಳೆಯಿಂದಾಗಿ ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಯಿತು. ವಿವಿಧ ಕೆಲಸ ಕಾರ್ಯಗಳಿಗೆ ನಗರಕ್ಕೆ ಬಂದಿದ್ದ ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡುವಂತಾಯಿತು. ಸಂಜೆಯ ನಂತರ ಮತ್ತೆ ಜೋರಾದ ಮಳೆ ನಿರಂತರವಾಗಿ ಸುರಿಯಿತು. ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಿಂದ ಸಮಸ್ಯೆ ಅನುಭವಿಸಿದರು. ವಿವಿಧ ಅಂಗಡಿ ಮುಂಗಟ್ಟುಗಳ ಮುಂಭಾಗ, ಬಸ್ ನಿಲ್ದಾಣಗಳಲ್ಲಿ ಜನರು ನಿಂತ ಮಳೆಯಿಂದ ರಕ್ಷಣೆ ಪಡೆದುಕೊಂಡರು. ಆಟೋ ಹಾಗೂ ಬಸ್‌ಗಳಲ್ಲಿ ಜನರು ವಿವಿಧ ಕಡೆಗಳಿಗೆ ತೆರಳಲು ರಾತ್ರಿಯ ವೇಳೆಯಲ್ಲಿ ಸಮಸ್ಯೆ ಉಂಟಾಯಿತು.

ರಾತ್ರಿಯ ವೇಳೆಯಲ್ಲೂ ಪ್ರಮುಖ ರಸ್ತೆಗಳಲ್ಲಿ ಚರಂಡಿ ನೀರು ಮಳೆಯಿಂದಾಗಿ ತುಂಬಿ ಹರಿಯಿತು. ಕೆಲವು ರಸ್ತೆಗಳಲ್ಲಿ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ದಿನವಿಡೀ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಅನುಭವಿಸುವಂತಾಯಿತು. ಸಂತೇಮರಹಳ್ಳಿ ಮುಖ್ಯ ರಸ್ತೆಯಲ್ಲಿ ಚರಂಡಿ ನೀರು ಮುಖ್ಯರಸ್ತೆಗೆ ನುಗ್ಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಗ್ರಾಮೀಣ ಪ್ರದೇಶದಲ್ಲೂ ಜೋರು:
ಚಾಮರಾಜನಗರ ತಾಲೂಕಿನ ಚಂದಕವಾಡಿ, ಕಾಗಲವಾಡಿ, ಆಲೂರು, ಕೂಡ್ಲೂರು, ದೊಡ್ಡರಾಯಪೇಟೆ, ಹರದನಹಳ್ಳಿ ಹಾಗೂ ಸಮೀಪದ ಗ್ರಾಮದಲ್ಲಿ ರಾತ್ರಿಯ ವೇಳೆಯಲ್ಲೂ ಜೋರು ಮಳೆ ಸುರಿಯಿತು. ಹಲವು ಗ್ರಾಮಗಳ ತೋಟ ಹಾಗೂ ಜಮೀನುಗಳಲ್ಲಿ ನೀರು ನಿಲ್ಲುವಷ್ಟು ಮಟ್ಟಿಗೆ ಮಳೆಯಾಯಿತು. ರಾತ್ರಿ ವೇಳೆಯಲ್ಲಿ ಹಿಡಿದ ಜಿಟಿಜಿಟಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳಲ್ಲಿ ನೀರು ತುಂಬಿದ್ದವು. ರೈತರು ಬಿತ್ತನೆಮಾಡಲು ಮಳೆ ಸಹಕಾರಿಯಾಯಿತು. ಆದರೆ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದ ಪರಿಣಾಮವಾಗಿ ಜನ-ಜಾನುವಾರುಗಳಿಗೆ ಸಮಸ್ಯೆಯಾಯಿತು. ಮನೆಯಿಂದ ಹೊರಬರಲು ಜನರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net