ಗೃಹ ಇಲಾಖೆಯನ್ನು ನಿಭಾಯಿಸುವಲ್ಲಿ ಸಚಿವರು ವಿಫಲ

64d37d91-929e-4dc2-b5a0-08a4821fff84
Published on

ಚಾಮರಾಜನಗರ: ರಾಜ್ಯದಲ್ಲಿ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಗೃಹ ಇಲಾಖೆಯನ್ನು ನಿಭಾಯಿಸುವಲ್ಲಿ ಗೃಹಸಚಿವರು ವಿಫಲರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಆರೋಪಿಸಿದರು.

ಕಳೆದ 11 ತಿಂಗಳಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಗೃಹ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ರಾಜ್ಯ ಸುರಕ್ಷಿತವಾಗಿಲ್ಲ. ರಾಜ್ಯ ಅಪಾಯಕಾರಿ ಸ್ಥಿತಿಯಲ್ಲಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿ ನಿಭಾಯಿಸದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಸರಿಯಾಗಿ ಈಡೇರಿಸಿಲ್ಲ. 5 ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಟಾನ ಮಾಡಿಲ್ಲ. ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ರೈತರಿಗೆ ಯಾವುದೇ ಕೃಷಿ ಬ್ಯಾಂಕ್‌ಗಳು ಸಾಲ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡುವಲ್ಲಿ ವಿಳಂಬ ಮಾಡುತ್ತಿದೆ. ಯುವನಿಧಿ ಯೋಜನೆ ಯುವಕರಿಗೆ ಸರಿಯಾಗಿ ತಲುಪಿಲ್ಲ. ಇದರಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವಲ್ಲಿ ಸರ್ಕಾರ ವಿಫಲವಾಗಿದೆ. ಗ್ಯಾರಂಟಿಗಳಿಂದಾಗಿ ಪ್ರತಿ ವ್ಯಕ್ತಿಯ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ನೋಂದಣಿ ಶುಲ್ಕ ಮತ್ತು ಆರ್‌ಟಿಸಿ ಶುಲ್ಕ ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ರಾಮಚಂದ್ರ, ನೂರೊಂದುಶೆಟ್ಟಿ, ವೃಷಬೇಂದ್ರಪ್ಪ, ವೇಣುಗೋಪಾಲ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಮಾಧ್ಯಮ ಸಂಚಾಲಕ ವೀರೇಂದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net