

ಚಾಮರಾಜನಗರ: ವಿಧಾನಸಭೆ ಅಧಿವೇಶದಲ್ಲಿ ಡಾ.ಸರೋಜಿನಿ ಮಹರ್ಷಿ ಪರಿಷ್ಕೃತ ವರದಿಯನ್ನು ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಬೇಕು ಎಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ಅಧ್ಯಕ್ಷ ಬೇಕರಿ ರಮೇಶ್ ಒತ್ತಾಯಿಸಿದರು.
2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ 14 ಅಂಶಗಳು, ಕೇಂದ್ರ ಸರ್ಕಾರದ 9 ಅಂಶಗಳ ಶಿಾರಸ್ಸು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯನ್ನು ಸಲ್ಲಿಸಲಾಗಿತ್ತು. ಈ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ಕನ್ನಡ ಮೊದಲ ಭಾಷೆಯಾಗಬೇಕು, ಹಿಂದಿ ಭಾಷೆ ಏರಿಕೆಯನ್ನು ನಿಲ್ಲಿಸಬೇಕು, ದ್ವಿ ಭಾಷಾ ನೀತಿಯನ್ನು ಜಾರಿಗೆ ತರಬೇಕು, ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬೇಕು. ಉನ್ನತ ಶಿಕ್ಷಣ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ, ಇಂಗ್ಲೀಷ್‌ನಲ್ಲಿ ನಡೆಯುತ್ತಿದ್ದು, ಕನ್ನಡದಲ್ಲಿ ನಡೆಯುವಂತಾಗಬೇಕು. ಉತ್ತರ ಕರ್ನಾಟಕದ ಸಹ್ಯಾದ್ರಿ, ಸಸ್ಯಕಾಶಿ, ಕಪ್ಪತಗುಡ್ಡದ ರಕ್ಷಣೆಗೆ ಪ್ರಾಧಿಕಾರ ರಚನೆ ಮಾಡಬೇಕು. ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ಸಹಕಾರ್ಯದರ್ಶಿ ಬಿ.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್ ಹಾಜರಿದ್ದರು.