

ಚಾಮರಾಜನಗರ: ಸಮಸಮಾಜ ನಿರ್ಮಾಣಕ್ಕೆ ತಮ್ಮ ಜೀವಮಾನವಿಡೀ ಹೋರಾಟ ಮಾಡಿದ್ದ ವಿ.ಶ್ರೀನಿವಾಸ್‌ಪ್ರಸಾದ್ ಅವರು ಅಸಮಾನತೆ ತೊಡೆದು ಹಾಕಿ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಆಯೋಜಿಸಿದ್ದ ವಿ.ಶ್ರೀನಿವಾಸ್‌ಪ್ರಸಾದ್ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀನಿವಾಸ್‌ಪ್ರಸಾದ್ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಮಾತನಾಡಿದರು.
ಜಿಲ್ಲೆಯ ಜನರು ವಿ.ಶ್ರೀನಿವಾಸ್‌ಪ್ರಸಾದ್ ಅವರನ್ನು 6 ಬಾರಿ ಸಂಸದರನ್ನಾಗಿ ಮಾಡಿದ್ದೀರ. ರಾಜಕಾರಣದಲ್ಲಿ ಅತಿರಥ ಮಹಾರಥರೇ ಇದ್ದ ಜಿಲ್ಲೆಯಲ್ಲಿ ಪ್ರಸಾದ್ ಅವರು 50 ವರ್ಷಗಳ ಸುದೀರ್ಘ ರಾಜಕಾರಣ ಮಾಡಿರುವುದೇ ದೊಡ್ಡ ವಿಚಾರವಾಗಿದೆ. ಸಂವಿಧಾನದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶ್ರೀನಿವಾಸ್‌ಪ್ರಸಾದ್ ಅವರು ಎಂದಿಗೂ ಜನಮಾನಸದಲ್ಲಿ ಅಜರಾಮರರಾಗಿರುತ್ತಾರೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಪ್ರಸಾದ್ ಓರ್ವ ಸ್ವಾಭಿಮಾನಿ ನಾಯಕರಾಗಿದ್ದರು. ಅವರು ತಮ್ಮ ರಾಜಕೀಯ ಜೀವನದಲ್ಲಿ ಮಾಡುತ್ತಿದ್ದ ಟೀಕೆಗಳು ಅಭಿವೃದ್ಧಿಯ ವಿಚಾರವೇ ಆಗಿತ್ತು. ಪ್ರತಿಯೊಬ್ಬರು ಅವರ ಹೋರಾಟ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಶ್ರೀನಿವಾಸ್‌ಪ್ರಸಾದ್ ತಮ್ಮ ಸಿದ್ಧಾಂತಕ್ಕೆ ಬದ್ಧವಾಗಿದ್ದರು. ಪ್ರತಿಯೊಂದು ರಾಜಕೀಯ ಪಕ್ಷಗಳು ತನ್ನದೇ ಆದ ಸಿದ್ಧಾಂತಗಳನ್ನು ಹೊಂದಿರುತ್ತದೆ. ವ್ಯಕ್ತಿಯ ಸಿದ್ಧಾಂತವನ್ನು ರಾಜಕಾರಣ ಕೇಳುವುದಿಲ್ಲ, ಆದರೆ ಸಿದ್ಧಾಂತ ಇಲ್ಲದವರು ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ವಿ.ಶ್ರೀನಿವಾಸ್‌ಪ್ರಸಾದ್ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಂದೂ ರಾಜೀಯಾಗಿಲ್ಲ. ತಮ್ಮ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವಗುಣವನ್ನು ಬೆಳೆಸಿಕೊಂಡು ಚಿಕ್ಕವಯಸ್ಸಿನಲ್ಲೇ ರಾಜಕೀಯಕ್ಕೆ ಬಂದರು. ತಮ್ಮ ಜನಪರ ಕಾಳಜಿಯಿಂದ ಇಷ್ಟು ಎತ್ತರಕ್ಕೆ ಬೆಳೆದರು. ಎಲ್ಲಾ ವರ್ಗದ ಜನರನ್ನು ಗೌರವಿಸುತ್ತಿದ್ದ ಅವರು ಎಂದಿಗೂ ತಮ್ಮ ವಿಚಾರದಲ್ಲಿ ರಾಜೀಮಾಡಿಕೊಂಡಿಲ್ಲ ಎಂದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅಗಲಿಕೆಯಿಂದ ಒಂದು ಬಗೆಯ ನಿರ್ವಾದ ಆವರಿಸಿದೆ. ಅವರು ಶಾರೀರಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಅವರ ಸಾಧನೆ, ಸೈದ್ಧಾಂತಿಕ ತತ್ವಗಳು ಮುಂದಿನ ತಲೆಮಾರಿಗೆ ಮಾರ್ಗದರ್ಶಕ ವಾಗಿರುತ್ತದೆ. ತಮ್ಮ ಕಂಗಳಲ್ಲಿ ಅಂಬೇಡ್ಕರ್ ಅವರನ್ನು ತುಂಬಿಕೊಂಡಿದ್ದ ಪ್ರಸಾದ್ ಅವರು ಹಳ್ಳಿ ಹಳ್ಳಿಗೂ ಬುದ್ಧ ಸಂದೇಶವನ್ನು ಸಾರುವ ಕೆಲಸ ಮಾಡಿದ್ದರು. ತಳಸಮುದಾಯಗಳು ಅವರ ಚಿಂತನೆಗಳನ್ನು ದಾರಿದೀಪ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಶ್ರೀನಿವಾಸ್ ಪ್ರಸಾದ್ ಅವರ ಪತ್ನಿ ಭಾಗ್ಯಲಕ್ಷ್ಮೀ ಪ್ರಸಾದ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕರಾದ ಬಿ.ಹರ್ಷವರ್ಧನ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಡಾ.ಮೋಹನ್, ಆರ್.ಚಂದ್ರು ಹಾಗೂ ಇತರರು ಉಪಸ್ಥಿತರಿದ್ದರು.