ಸವಲತ್ತು ಸದ್ಬಳಕೆ ಮಾಡಿಕೊಳ್ಳಿ

Published on

ಹನೂರು: ಸರ್ಕಾರದಿಂದ ಸಿಗುವ ಸವಲತ್ತುಗಳ ಪ್ರಯೋಜನ ಪಡೆದುಕೊಂಡು ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ ತಿಳಿಸಿದರು.

ಪಟ್ಟಣದ ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ತಾಲೂಕು ಅಭಿವೃದ್ಧಿ ಸಂಘ ಹಾಗೂ ಮ.ಬೆಟ್ಟ ದೇವ ಸೋಲಿಗ ಕಲ್ಚರಲ್ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಆದಿವಾಸಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶೈಕ್ಷಣಿಕ ಸಮಾಲೋಚನೆ ಹಾಗೂ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ 80ಕ್ಕೂ ಹೆಚ್ಚು ಗಿರಿಜನರ ಹಾಡಿಗಳಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದರೆ ಈ ಹಿಂದೆ ಗಿರಿಜನರು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಹಿಂದೇಟು ಹಾಕುತ್ತಿದ್ದರು. ಜತೆಗೆ ಪ್ರಾಥಮಿಕ ಶಿಕ್ಷಣ ಪಡೆದು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದರು. ಇದರಿಂದ ಸಮುದಾಯ ತೀರಾ ಹಿಂದುಳಿಯುವುದಕ್ಕೆ ಕಾರಣವಾಗಿತ್ತು. ಆದರೀಗ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಕಾಲೇಜು ಹಂತದಲ್ಲೂ ಶಿಕ್ಷಣ ಪಡೆಯುತ್ತಿರುವುದು ಮೆಚ್ಚುಗೆಯ ಸಂಗತಿ. ಇದರಿಂದ ಸಮುದಾಯವು ಅಭಿವೃದ್ಧಿ ಹೊಂದಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣದ ಜತೆಗೆ ಕರಕುಶಲತೆಯ ಬಗ್ಗೆ ತರಬೇತಿ ಪಡೆದುಕೊಂಡು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಜೀಂ ಪ್ರೇಮ್‌ಜೀ ಫೌಂಡೇಷನ್ ಶಿಕ್ಷಣಾಧಿಕಾರಿ ಪ್ರತಾಪ್ ಅವರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರದ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಆಯ್ಕೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ತೇಜಸ್ವಿನಿ, ದೇವ ಸೋಲಿಗ ಕಲ್ಚರಲ್ ಡೆವಲಪ್‌ಮೆಂಟ್ ಮುಖ್ಯಸ್ಥ ವಿ. ಮುತ್ತಯ್ಯ, ಕ್ಷೇತ್ರ ಸಂಯೋಜಕ ಗಿರೀಶ್‌ಕುಮಾರ್, ಸೋಲಿಗ ಆ್ಯಕ್ಷನ್ ಪೋರಂನ ಸ್ವಯಂ ಸೇವಕರಾದ ಚಂದು, ಶ್ರೀನಿವಾಸ್, ಮುಖ್ಯಶಿಕ್ಷಕಿ ಚಂದ್ರಮ್ಮ, ಗಿರಿಜನ ಮುಖಂಡರಾದ ಮಾದೇಶ್, ಮಾದು, ಕರಿಯಪ್ಪ, ಜಡೇಸ್ವಾಮಿ, ಕೆಂಪಣ್ಣ, ರಾಮಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net