

ಯಳಂದೂರು: ತಾಲೂಕಿನ ಕೊಮಾರನಪುರ ಗ್ರಾಮದಲ್ಲಿ ಭಾರಿ ಗಾತ್ರದ ಗೋಧಿ ಬಣ್ಣದ ನಾಗರಹಾವನ್ನು ಉರಗ ತಜ್ಞ ಸ್ನೇಕ್ ಸುಂದರ್ ರಕ್ಷಿಸಿ ಶನಿವಾರ ಕಾಡಿಗೆ ಬಿಟ್ಟಿದ್ದಾರೆ.
ಕೊಮಾರನಪುರದಲ್ಲಿ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಅರ್ಚಕ ರವಿಕುಮಾರ್ ಎಂಬುವರ ತೋಟದ ಮನೆಯಲ್ಲಿ ಹಾವು ಕಾಣಿಸಿಕೊಂಡಿತು. ಈ ಬಗ್ಗೆ ಕೂಡಲೇ ರವಿಕುಮಾರ್ ಅವರು ಸ್ನೇಕ್ ಸುಂದರ್ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸುಂದರ್ ಅದನ್ನು ಸುರಕ್ಷಿತವಾಗಿ ಹಿಡಿದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸುಂದರ, ಇದೀಗ ಮಳೆ ಆರಂಭಗೊಂಡಿದೆ. ಸಾಮಾನ್ಯವಾಗಿ ಬೇಸಿಗೆ ಹಾಗೂ ಮಳೆಗಾಲದಲ್ಲಿ ಹಾವುಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳಲು ತಣ್ಣಗಿನ ಪ್ರದೇಶಕ್ಕೆ ಸೇರಿಕೊಳ್ಳುತ್ತವೆ. ಈ ಸಮಯದಲ್ಲಿ ಇವುಗಳ ಓಡಾಟ ಹೆಚ್ಚಾಗಿರುತ್ತದೆ. ಹಾಗಾಗಿ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಮಕ್ಕಳು, ವಯೋವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮನೆಯ ಸುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.