ಜು.7ರಂದು ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ

042
Published on

ಚಾಮರಾಜನಗರ: ಜು.7ರಂದು ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ.ಎಂ.ಕುಮಾರ್ ಚಿಕ್ಕಹೊಳೆ ಮಾಹಿತಿ ನೀಡಿದರು.

ಮಹೇಶ್ ಕುದರ್ ಅಭಿಮಾನಿ ಬಳಗ ಹಾಗೂ ಬೆಂಗಳೂರಿನ ಅಮೋಘ ವರ್ಷ ಐಎಎಸ್, ಕೆಎಎಸ್ ಅಕಾಡೆಮಿಯು ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಮಹೇಶ್ ಕುದರ್ ಹುಟ್ಟುಹಬ್ಬದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಐಎಎಸ್, ಕೆಎಎಸ್, ಪಿಎಸ್‌ಐ, ಪಿಡಿಓ, ಎಫ್‌ಡಿಎ, ಎಸ್‌ಡಿಎ, ಪಿಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಉದ್ಘಾಟಿಸುವರು, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು, ಅಮೋಘವರ್ಷ ಐಎಎಸ್, ಕೆಎಎಸ್ ಅಕಾಡೆಮಿ ಮುಖ್ಯಸ್ಥ ರಾಮಣ್ಣಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಚಂದ್ರಮ್ಮ, ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಎಂ.ಆರ್.ಸುಮತಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕಾವೇರಿ ಡಯಾಗ್ನೋಸ್ಟಿಕ್ ಮತ್ತು ಸ್ಕ್ಯಾನಿಂಗ್ ಸೆಂಟರ್ ಸಹಯೋಗದಲ್ಲಿ ಉಚಿತ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ, ಪರಿಸರ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದರ ಮೂಲಕ ಜಿಲ್ಲೆಯಲ್ಲಿ ಆರೋಗ್ಯಕರ ಪರಿಸರವನ್ನು ರೂಪಿಸುವುದು ಸಂಘದ ಮೂಲ ಉದ್ದೇಶವಾಗಿದೆ ಕಳೆದ ವರ್ಷದಿಂದ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ ಎಂದರು.

ಗೋಷ್ಠಿಯಲ್ಲಿ ಮರಿಯಾಲದ ಹುಂಡಿ ಕುಮಾರ್, ರೇವಣ್ಣ, ಎಂ.ಸಿ.ನಾಗರಾಜು, ಪರಶಿವಮೂರ್ತಿ, ಅನಿಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net