ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

Published on

ಕೊಳ್ಳೇಗಾಲ: ಪಟ್ಟಣ ವ್ಯಾಪ್ತಿಗೆ ಬರುವ ಪಾಪನ ಕೆರೆಯಲ್ಲಿ ಅನಧಿಕೃತವಾಗಿ ನರೇಗಾದಡಿ ಹೂಳೆತ್ತಿಸಿ ಆ ಮಣ್ಣಿನಿಂದ ಕೆರೆಯ ಪಕ್ಕದ ಜಮೀನುಗಳ ಬದಿಗೆ ಹಾಕಿ ಕೆರೆ ಒತ್ತುವರಿ ಮಾಡಲು ಅವಕಾಶವಾಗುವಂತೆ ಮಾಡಿರುವ ಸಿದ್ದಯ್ಯನಪುರ ಪ್ರಭಾರ ಪಿಡಿಒ ಸೇರಿದಂತೆ ಇನ್ನಿತರ ಅಧಿಕಾರಿಗಳ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ರೈತರು ಶನಿವಾರ ಪ್ರತಿಭಟಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿರುವ ಇಒ ಕಚೇರಿ ಮುಂದೆ ಜಮಾಯಿಸಿದ ಪಾಪನಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಿದ್ದಯ್ಯನಪುರ ಪಂಚಾಯಿತಿ ಪ್ರಭಾರ ಪಿಡಿಒ ಶಿವಮೂರ್ತಿ, ತಾ.ಪಂ. ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಹಾಗೂ ಇಒ ಶ್ರೀನಿವಾಸ್ ಅವರಿಗೆ ಧಿಕ್ಕಾರ ಕೂಗಿದರು.

ಮುಖಂಡ ಉಮೇಶ್ ಮಾತನಾಡಿ, ಇತ್ತೀಚೆಗೆ ಪಟ್ಟಣದ ವ್ಯಾಪ್ತಿಗೆ ಬರುವ ಪಾಪನಕೆರೆ ಸ.ನಂ.456 ಬಿ 40 ಎಕರೆ ಕೆರೆಯಲ್ಲಿ ಸಿದ್ದಯ್ಯನಪುರ ಪಂಚಾಯಿತಿ ಅಧಿಕಾರಿಗಳು ಅನಧಿಕೃತವಾಗಿ ಹೂಳೆತ್ತುವ ಕಾಮಗಾರಿ ನಡೆಸಿದ್ದರು. ಅಲ್ಲದೆ, ಹೂಳೆತ್ತಿದ ಮಣ್ಣನ್ನು ಕೆರೆ ಪಕ್ಕದ ಜಮೀನುಗಳ ಬದಿಯಲ್ಲಿ ಸುರಿದು ಕೆರೆ ಒತ್ತುವರಿ ಮಾಡಿದ್ದರು. ಇದನ್ನು ಈ ಭಾಗದ ರೈತರು ಪ್ರಶ್ನಿಸಿ ಕಾಮಗಾರಿಯನ್ನು ನಿಲ್ಲಿಸಿದ್ದೆವು. ಈ ವೇಳೆ ಪಿಡಿಒ ಶಿವಮೂರ್ತಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದರು.

ಈ ವೇಳೆ ಕೆರೆ ಪಕ್ಕದ ಜಮೀನುಗಳ ಬದಿಯಲ್ಲಿ ಮಣ್ಣು ಸುರಿದು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದೆವು. ಅದಕ್ಕೆ ಅಧಿಕಾರಿಗಳು ಒಪ್ಪಿದ್ದರು. ಅಂದಿನಿಂದ ಹಲವು ಬಾರಿ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದರೂ ಮಣ್ಣು ತೆರವು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಈಗಾಗಲೇ ಅನಧಿಕೃತ ಸ್ಥಳದಲ್ಲಿ ಕಾಮಗಾರಿ ಮಾಡಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕೆರೆ ಪಕ್ಕದ ಜಮೀನಿನ ಬದಿಯಲ್ಲಿ ಸುರಿದಿರುವ ಮಣ್ಣನ್ನು ತೆರವು ಮಾಡಬೇಕು. ಕೆರೆ ಸರ್ವೇ ಮಾಡಿ ಕೆರೆಯನ್ನು ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಹೊನ್ನೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಸಿದ್ದಾರ್ಥ, ಪಿ.ಕೃಷ್ಣರಾಜ್, ಜಗದೀಶ್, ಮಹದೇವ, ಪುಟ್ಟರಾಜು, ರಂಗಸ್ವಾಮಿ, ಕಿರಣ್, ಮೋಹನ್, ಸುರೇಶ್, ಅಲ್ಬಾಟ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net