

ಚಾಮರಾಜನಗರ : ದೇಶದ ನಾಗರಿಕರು ಸಂವಿಧಾನವನ್ನು ತಿಳಿಯುವ ಪ್ರಾಮಾಣಿಕ ಪ್ರಯತ್ನ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅಜೀಂ ಪ್ರೇಮ್ಜಿ ಫೌಂಡೇಷನ್ ಪ್ರತಿನಿಧಿ ಓಂಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಎರಡು ದಿನಗಳ ಸಂವಿಧಾನ ತಿಳಿಯೋಣ ಬಾ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನವು ಅರಿವಿನ ಹಣತೆ ಇದ್ದಂತೆ, ಪ್ರತಿಯೊಬ್ಬರನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಸರಿದಾರಿಯಲ್ಲಿ ಬೆಳಕಿನೆಡೆಗೆ ಕೊಂಡೊಯ್ಯುವ ಒಬ್ಬ ಗುರುವಿನಂತೆ. ಸಂವಿಧಾನವನ್ನು ನಾವು ತಿಳಿಯುವುದಷ್ಟೇ ಅಲ್ಲ, ನಮ್ಮ ಸುತ್ತಲಿನ ಸಮಾಜದಲ್ಲಿ ಅದನ್ನು ತಿಳಿಸುವ ಪ್ರಯತ್ನ ಕೂಡ ಅತ್ಯವಶ್ಯ ಎಂದು ತಿಳಿಸಿದರು.
ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ನಿರ್ದೇಶಕ ಡಾ.ಎನ್.ಎಸ್.ಪ್ರಶಾಂತ್ ಮಾತನಾಡಿ, ಸಂವಿಧಾನವನ್ನು ಸರಿಯಾಗಿ ತಿಳಿಯುವುದೆಂದರೆ ಕೇವಲ ಸಂವಿಧಾನದ ವಿವಿಧ ಭಾಗಗಳು, ಅನುಚ್ಛೇದಗಳನ್ನು ತಿಳಿಯುವುದಲ್ಲ. ಅದರ ಹಿನ್ನೆಲೆ, ಉದ್ದೇಶ ಹಾಗೂ ಈ ಒಂದು ಮಹತ್ಕಾರ್ಯದ ಹಿಂದೆ ಶ್ರಮಿಸಿರುವ ಬಹಳಷ್ಟು ವ್ಯಕ್ತಿಗಳ ಶ್ರಮದ ಕುರಿತು ತಿಳಿದಾಗ ಸಂವಿಧಾನವನ್ನು ಸರಿಯಾಗಿ ಅರ್ಥೈಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದಲ್ಲಿ ತನಗಿರುವ ಹಕ್ಕುಗಳ ಬಗ್ಗೆಯಷ್ಟೇ ತಿಳಿಯದೆ, ಮೂಲಭೂತ ಕರ್ತವ್ಯಗಳ ಬಗ್ಗೆಯೂ ತಿಳಿದು ತಮ್ಮ ದಿನನಿತ್ಯದ ಜೀವನದಲ್ಲಿ ಅವುಗಳ ಪಾಲನೆ ಮಾಡಬೇಕು ಎಂದರು.
ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ.ತಾನ್ಯಾ, ಆದಿವಾಸಿ ಸಮುದಾಯದ ಮುಖಂಡರಾದ ದಾಸೇಗೌಡ, ಬಸವರಾಜು, ಕಾರನ ಕೇತೇಗೌಡ, ಅಜೀಮ್ ಪ್ರೇಮ್ಜಿ ಫೌಂಡೇಷನ್ ಪ್ರತಿನಿಧಿಗಳು ಹಾಗೂ ಇತರರು ಭಾಗವಹಿಸಿದ್ದರು.