ಗಡಿಜಿಲ್ಲೆಯಲ್ಲಿ ಅಡಕೆ ಬೆಳೆ ಘಮಲು

18rajesh2
Published on

ಚಾಮರಾಜನಗರ : ನೀರಿಲ್ಲದ ಹಾಗೂ ಮಳೆಯಾಶ್ರಿತ ಪ್ರದೇಶವಾಗಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಬರಗಾಲದಿಂದ ಬಸವಳಿದಿದ್ದ ರೈತರು, ಇತ್ತೀಚೆಗೆ ವಾಣಿಜ್ಯ ತೋಟಗಾರಿಕೆ ಬೆಳೆಯಾದ ಅಡಕೆ ಕೃಷಿಯತ್ತಾ ಹೆಚ್ಚು ಮುಖಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ 1012.3 ಹೆಕ್ಟೇರ್ ಪ್ರದೇಶದಲ್ಲಿ ಇದ್ದ ಅಡಕೆ ತೋಟ, 2022-23 ನೇ ಸಾಲಿನಲ್ಲಿ 1358.79 ಹೆಕ್ಟೇರ್ ಪ್ರದೇಶಕ್ಕೆ ವಿಸ್ತೀರ್ಣವಾಗಿದೆ. ಅಂದರೆ ಸುಮಾರು 346 ಹೆಕ್ಟೇರ್ ಪ್ರದೇಶ ಹೆಚ್ಚಾಗಿದೆ. ಈ ವರ್ಷದಲ್ಲಿ ಸೂಕ್ತ ರೀತಿಯಲ್ಲಿ ಮಳೆಯಾಗದ ಹಿನ್ನೆಲೆ ಸಾಕಷ್ಟು ಕಡೆಗಳಲ್ಲಿ ಅಡಕೆ ಸಸಿಗಳು ಒಣಗಿರುವುದು ಕಂಡು ಬಂದಿದೆ. ಆದರೂ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದರಿಂದ ಅಡಕೆ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ತೋಟಗಾರಿಕೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2022-23ನೇ ಸಾಲಿನಲ್ಲಿ ಜಿಲ್ಲೆಯ ಚಾಮರಾಜನಗರ ತಾಲೂಕಿನಲ್ಲಿ 975.16 ಹೆಕ್ಟೇರ್ ವಿಸ್ತೀರ್ಣದಲ್ಲಿ 1218 ಮೆಟ್ರಿಕ್ ಟನ್ ಅಡಕೆ ಉತ್ಪಾದನೆಯಾಗಿತ್ತು. ಗುಂಡ್ಲುಪೇಟೆ ತಾಲೂಕಿನ 86.31 ಹೆಕ್ಟೇರ್ ವಿಸ್ತೀರ್ಣದಲ್ಲಿ 107.88 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿತ್ತು. ಕೊಳ್ಳೇಗಾಲ ತಾಲೂಕಿನಾದ್ಯಂತ 162.75 ಹೆಕ್ಟೇರ್ ವಿಸ್ತೀರ್ಣದಲ್ಲಿ 203.43 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿತ್ತು. ಹನೂರು ತಾಲೂಕಿನ 39.22 ಹೆಕ್ಟೇರ್ ವಿಸ್ತೀರ್ಣದಲ್ಲಿ 49.02 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿತ್ತು. ಹನೂರು ತಾಲೂಕಿನಲ್ಲಿ 95.35 ಹೆಕ್ಟೇರ್ ವಿಸ್ತೀರ್ಣದಲ್ಲಿ 119.18 ಮೆಟ್ರಿಕ್ ಟನ್ ಅಡಕೆ ಉತ್ಪಾದನೆ ಮಾಡಲಾಗಿತ್ತು. ಒಟ್ಟಾರೆಯಾಗಿ 1358.79 ಹೆಕ್ಟೇರ್ ವಿಸ್ತೀರ್ಣದಲ್ಲಿ 1698.48 ಮೆಟ್ರಿಕ್ ಟನ್ ಅಡಕೆ ಉತ್ಪಾದನೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅಡಕೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉತ್ಪಾದನೆಯೂ ಹೆಚ್ಚುತ್ತಿದೆ. ಅಡಕೆ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಚ್ಚಿನ ಜನರು ಪ್ರಮುಖವಾದ ತೋಟಗಾರಿಕೆ ಬೆಳೆಗಳ ಜತೆಗೆ ವಾಣಿಜ್ಯ ತೋಟಗಾರಿಕೆ ಬೆಳೆಯಾದ ಅಡಕೆ ಕೃಷಿ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

346 ಹೆಕ್ಟೇರ್ ವಿಸ್ತೀರ್ಣ ಹೆಚ್ಚಳ:
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರತಿವರ್ಷವೂ ಅಡಕೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತಲೇ ಇದೆ. 2021-22 ನೇ ಸಾಲಿನಲ್ಲಿ 1012.3 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಸಲು ಇತ್ತು. ಅದು 2022-23 ನೇ ಸಾಲಿನಲ್ಲಿ 1358.79 ಹೆಕ್ಟೇರ್‌ನಷ್ಟು ವಿಸ್ತೀರ್ಣವಾಗಿದೆ. ಅಂದರೆ ಹಿಂದಿನ ವರ್ಷದಲ್ಲಿ 346 ಹೆಕ್ಟೇರ್ ವಿಸ್ತೀರ್ಣ ಹೆಚ್ಚಳವಾಗಿದೆ. ಇಂದಿನ ವರ್ಷದಲ್ಲಿ ಮಳೆ ಕಡಿಮೆ ಇರುವುದರಿಂದ ಅಡಕೆ ಬೆಳೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ಸ್ವತಃ ನೀರಾವರಿ ಇರುವವರೆ ಹೆಚ್ಚಾಗಿ ಅಡಕೆ ಬೆಳೆಯುತ್ತಿರುವುದರಿಂದ ಹಾಗೂ ಬಾಳೆ ಜತೆಗೆ ಅಡಕೆ ಬೆಳೆಯುತ್ತಿರುವುದರಿಂದ ಅಡಕೆ ಸಲು ಚೆನ್ನಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದರಿಂದ ರೈತರು ಅಡಕೆ ಬೆಳೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ.

ಉತ್ತಮ ಬೆಲೆ:
ಅಡಕೆ ಧಾರಣೆ ಕಳೆದ ಮೂರು-ನಾಲ್ಕು ವರ್ಷಗಳಿಂದ ಕ್ವಿಂಟಾಲ್‌ಗೆ 80 ಸಾವಿರ ರೂ.ನಿಂದ ಸುಮಾರು 1 ಲಕ್ಷ ರೂ.ವರೆಗೂ ಏರಿಕೆಯಾಗಿತ್ತು. ಸಾಮಾನ್ಯವಾಗಿ 45-60 ಸಾವಿರ ರೂ. ಆಸುಪಾಸಿನಲ್ಲಿ ಧಾರಣೆ ಇರುತ್ತದೆ. ಈ ನಿಟ್ಟಿನಲ್ಲಿ ಅಡಕೆಯ ಕಡೆಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಸುಮಾರು 1 ಹೆಕ್ಟೇರ್‌ಗೆ 1.25 ಮೆಟ್ರಿಕ್ ಟನ್ ಇಳುವರಿ ಪಡೆಯಲಾಗಿತ್ತು. ಇತ್ತೀಚೆಗೆ 1 ಎಕರೆ ಅಡಕೆ ಬೆಳೆಯಲು ಸರಾಸರಿ ಲೆಕ್ಕಾಚಾರದಲ್ಲಿ ಗರಿಷ್ಠ 75 ಸಾವಿರ ರೂ. ಖರ್ಚಾಗುತ್ತಿದೆ. ಎಕರೆಗೆ 7-8 ಕ್ವಿಂಟಾಲ್ ಅಡಕೆಯನ್ನು ಬೆಳೆಯಬಹುದಾಗಿದೆ. ಅಡಕೆಯ ಸುಲಿದು, ಬೇಯಿಸಿ ಸ್ವತಃ ಸಂಸ್ಕರಣೆ ಮಾಡಿದರೆ ಗುತ್ತಿಗೆ ನೀಡುವುದಕ್ಕಿಂತ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಈ ದೃಷ್ಟಿಯಿಂದ ಹೆಚ್ಚಿನ ರೈತರು ವಾಣಿಜ್ಯ ತೋಟಗಾರಿಕೆ ಬೆಳೆಯಾಗಿರುವ ಅಡಕೆಯತ್ತಾ ಮುಖ ಮಾಡುತ್ತಿದ್ದಾರೆ.

ಉತ್ತಮ ಮಳೆಯಾದರೆ ಅನುಕೂಲ:
ಈ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರಿನಲ್ಲಿ ಅಧಿಕ ಮಳೆಯಾದರೆ ಅಡಕೆ ಕೃಷಿಗೆ ಅನುಕೂಲವಾಗಲಿದ್ದು ಮತ್ತಷ್ಟು ವಿಸ್ತೀರ್ಣವಾಗುವ ಸಾಧ್ಯತೆ ಇದೆ. ಅಡಕೆ ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಸುವರ್ಣಾವತಿ ನದಿ ಹಂಚಿನ ಪ್ರದೇಶಗಳಲ್ಲಿ ಹೆಚ್ಚಾಗಿ ಅಡಕೆ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾದರೆ ಅಡಕೆ ಬೆಳೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಅಡಕೆ ಬೆಳೆಗಾರರು ಇದ್ದಾರೆ. ಆದರೂ ಬಹುತೇಕ ರೈತರು ಸ್ವತಃ ನೀರಾವರಿ ವ್ಯವಸ್ಥೆ ಮಾಡಿಕೊಂಡು ಅಡಕೆ ಬೆಳೆಯುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಅಡಕೆ ವಿಸ್ತೀರ್ಣವಾಗುವ ಜತೆಗೆ, ಉತ್ಪಾದನೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದರಿಂದ ಅಡಕೆ ವಿಸ್ತೀರ್ಣ ಹೆಚ್ಚಾಗುತ್ತಿದೆ. ನೀರಾವರಿ ಇರುವವರು ಅಡಕೆ ಕೃಷಿಯತ್ತ ಬರುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಧಾರಣೆ ಹೆಚ್ಚಾದಂತೆ ಆ ಬೆಳೆ ಬೆಳೆಯಲು ರೈತರು ಮುಂದಾಗುತ್ತಾರೆ.ಡಾ.ಎ.ವಿ.ಸಂಜಯ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net