ಎಣ್ಣೆ ಏಟಿಗೆ ‘ಎದುರೇಟು’

17rajesh1
Published on

ಚಾಮರಾಜನಗರ: ಲೋಕಸಭೆ ಚುನಾವಣೆ ಸಂದರ್ಭದ ಎಣ್ಣೆ ಏಟಿಗೆ ಅಬಕಾರಿ ಇಲಾಖೆ ಎದುರೇಟು ನೀಡಲು ಪ್ರಯತ್ನ ಮಾಡಿದೆ.

ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಾ.16ರಿಂದ ಮೇ 17ರವರೆಗೆ ಒಟ್ಟು 493 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 403 ಜನರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. 44 ದ್ವಿಚಕ್ರ ವಾಹನ, ನಾಲ್ಕು ಚಕ್ರದ ಒಂದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. 51 ಕ್ರಿಮಿನಲ್ ಮೊಕದ್ದಮೆ, 75 ಅಂಗಡಿಗಳ ಮೇಲೆ ಸನ್ನದು ಷರತ್ತು ಉಲ್ಲಂಘನೆ ಪ್ರಕರಣ, ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ಸೇವನೆ ವಿರುದ್ಧ 367 ಪ್ರಕರಣಗಳನ್ನು ದಾಖಲಿಸಲಾಗಿದೆ. 376 ಜನರು ಪೊಲೀಸ್ ಠಾಣೆಯಲ್ಲಿ ಜಾಮೀನು ಪಡೆದಿದ್ದಾರೆ. 27 ಜನರು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಗಳು ನ್ಯಾಯಸಮ್ಮತ ಚುನಾವಣೆ ನಡೆಸಲು ನೆರವಾಗುವ ಜತೆಗೆ ಮದ್ಯ ಸಾಗಣೆ, ಹಂಚಿಕೆಗೆ ಭೀತಿ ಹುಟ್ಟಿಸುವಂತೆ ಮಾಡಿತ್ತು. ಇದಕ್ಕಾಗಿ ಹಲವರ ಮೇಲೆ ಕೇಸ್ ದಾಖಲು ಮಾಡಿತ್ತು.
ಅಕ್ರಮ ಮದ್ಯ ಸಾಗಣೆಗೂ ಕುಣಿಕೆ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಕ್ಕಿಬಿದ್ದ ಬಹುಪಾಲು ಆರೋಪಿಗಳು ಅಕ್ರಮ ಮದ್ಯ ಸಾಗಣೆ ಕುಣಿಕೆಗೆ ಸಿಲುಕಿದವರು. ಚುನಾವಣೆಗಾಗಿ ಹೆಂಡ ಹಂಚಿಕೆ ಮಾಡುವ ಪ್ರಕರಣದ ಇದಾಗಿರಲಿಲ್ಲ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಹೊಸದಾಗಿ ವೈನ್‌ಶಾಪ್, ಬಾರ್‌ಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿಗಳಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯ ಖರೀದಿ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಎಲೆಕ್ಷನ್ ವೇಳೆ ಮದ್ಯ ಖರೀದಿ ಮಾಡಿ ಊರಲ್ಲಿ ಮಾರಾಟ ಮಾಡಲು ಹೋಗುತ್ತಿದ್ದವರೂ ಸಿಕ್ಕಿಬಿದ್ದಿದ್ದಾರೆ.

ಅಭ್ಯರ್ಥಿ ಪರ ಎಣ್ಣೆ ಹಂಚಿಕೆ ಕೇಸ್:
ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಫೋಟೋ ಅಂಟಿಸಿದ್ದ ಮದ್ಯದ ಪೌಚ್‌ಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದ ಸಂಬಂಧ ಯಳಂದೂರು ತಾಲೂಕಿನ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ವ್ಯಕ್ತಿಯೊಬ್ಬ ಮದ್ಯವನ್ನು ಹಂಚಿಕೆ ಮಾಡುತ್ತಿದ್ದ. ಈ ವಿಡಿಯೋದಲ್ಲಿ ಇರುವ ದೇಗುಲವನ್ನು ಅಬಕಾರಿ ಇಲಾಖೆ ಉಪ ಆಯುಕ್ತ ನಾಗಶಯನ ಗಮನಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಇದು ಕುಣಗಳ್ಳಿ ಎಂದು ಗೊತ್ತಾಗಿದೆ. ಗ್ರಾಮಕ್ಕೆ ಭೇಟಿ ನೀಡಿದಾಗ ವಿಡಿಯೋದಲ್ಲಿ ಮದ್ಯ ಪಡೆದುಕೊಂಡಿದ್ದ ಗ್ರಾಮಸ್ಥರು ಸಿಕ್ಕಿದ್ದಾರೆ. ಇವರನ್ನು ವಿಚಾರಿಸಿದಾಗ ಮದ್ಯ ತಂದು ಕೊಟ್ಟವರು ಯಾರೆಂದು ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಾಂಬಳ್ಳಿ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಹೆಸರಿನಲ್ಲಿ ದೂರು ದಾಖಲು ಮಾಡಿದ್ದಾರೆ.
ಅಪಪ್ರಚಾರಕ್ಕೆ ಹೀಗೆ ಮಾಡಿದ್ರಾ?: ಚುನಾವಣೆಯಲ್ಲಿ ಅಪಪ್ರಚಾರ ಮಾಡುವ ಉದ್ದೇಶದಿಂದ ಕುಣಗಳ್ಳಿ ಗ್ರಾಮದಲ್ಲಿ ಮದ್ಯ ಹಂಚಿಕೆ ಮಾಡಿ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಯ ಫೋಟೋ ಹಾಕಿದ್ದ ಮದ್ಯದ ಪೌಚ್ ಹಂಚಿಕೆಯನ್ನು ಬೇರೆ ಕಡೆಗಳಲ್ಲಿ ಮಾಡಿದ್ದರೆ ಪ್ರಕರಣ ಮರುಕಳಿಸುತ್ತಿತ್ತು ಎಂದೂ ಹೇಳಲಾಗುತ್ತಿದೆ.


98 ಕೋಟಿ ರೂ. ಮೌಲ್ಯದ ಬಿಯರ್ ವಶವಾಗಿತ್ತು:
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡಮೊತ್ತದ ಬಿಯರ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಏ.2ರಂದು ಚುನಾವಣಾಧಿಕಾರಿ ಕಚೇರಿಗೆ ಬಂದ ಅನಾಮಧೇಯ ಕರೆಯ ಮಾಹಿತಿ ಆಧರಿಸಿ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದ ತೊರೆಮಾವು, ಇಮ್ಮಾವು ಗ್ರಾಮಗಳಲ್ಲಿರುವ ಯುನೈಟೆಡ್ ಬ್ರೇವರಿಸ್ ಲಿಮಿಟೆಡ್‌ನಲ್ಲಿ 98.52 ಕೋಟಿ ರೂ. ಮೌಲ್ಯದ ಬಿಯರ್ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ದಾಳಿ ವೇಳೆ ಲೆಕ್ಕದ ಪುಸ್ತಕದೊಂದಿಗೆ ಭೌತಿಕ ದಾಸ್ತಾನು ಪರಿಶೀಲಿಸಿದಾಗ ಲೆಕ್ಕದ ಪುಸ್ತಕದ ದಾಸ್ತಾನಿಗಿಂತ 7000 ವಿವಿಧ ಬ್ರ್ಯಾಂಡಿನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು ಕೊಠಡಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು 6,03,644 ರಟ್ಟಿನ ಪೆಟ್ಟಿಗೆ ಮತ್ತು ಕೆಗ್‌ಗಳಲ್ಲಿ 23.160 ಲೀಟರ್, ಬಿಬಿಟಿ ಟ್ಯಾಂಕ್‌ನಲ್ಲಿ 5,16,700 ಲೀಟರ್, ಯು.ಟಿ.ಟ್ಯಾಂಕ್‌ನಲ್ಲಿ 66,16,700 ಲೀಟರ್, ಸೈಲೋಸ್ ಟ್ಯಾಂಕ್‌ನಲ್ಲಿ 6,50,458 ಕೆಜಿ ಕಚ್ಚಾವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಮದ್ಯ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಅಂಗಡಿಗಳ ಸಿಸಿಟಿವಿ ಕ್ಯಾಮರಾ ಪರಿಶೀಲನೆ, 13 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.ಆರ್.ನಾಗಶಯನ, ಉಪ ಆಯುಕ್ತ, ಅಬಕಾರಿ ಇಲಾಖೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net