

ಚಾಮರಾಜನಗರ : ಇನ್ನೆರಡು ವಾರಗಳಲ್ಲಿ ಬೇಸಿಗೆ ರಜೆ ಮುಕ್ತಾಯಗೊಂಡು ಶಾಲೆಗಳು ಪುನಾರಂಭಗೊಳ್ಳಲಿದ್ದು, ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ದಿನವೇ ಹೊಸ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿದ್ಯಾರ್ಥಿಗಳ ಕೈ ಸೇರಲಿದೆ.
2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ತರಗತಿಗಳು ಮೇ 29ರಿಂದ ಆರಂಭವಾಗಲಿದೆ. ಪ್ರಾರಂಭದ ದಿನವೇ ನೂತನ ಪಠ್ಯಪುಸ್ತಕಗಳು ಹಾಗೂ ಸಮವಸವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಚಾಮರಾಜನಗರ ತಾಲೂಕಿನ ಶಾಲೆಗಳಿಗೆ 4,01,121 ಉಚಿತ ಪುಸ್ತಕಗಳ ಬೇಡಿಕೆ ಇತ್ತು. ಅದರಲ್ಲಿ 1,99,017 ಪುಸ್ತಕಗಳು ಇಲಾಖೆಗೆ ಸರಬರಾಜು ಆಗಿದೆ. ಈಗಾಗಲೇ, 2531 ಪುಸ್ತಕಗಳನ್ನು ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ಅನುದಾನರಹಿತ ಶಾಲೆಗಳಿಂದ ಮಾರಾಟಕ್ಕೆ 1,22,448 ಪುಸ್ತಕಗಳ ಬೇಡಿಕೆ ಇತ್ತು. ಅದರಲ್ಲಿ 73,549 ಪುಸ್ತಕಗಳು ಸರಬರಾಜು ಮಾಡಲಾಗಿದ್ದು, ಈಗಾಗಲೇ 20,564 ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 2,57,517 ಉಚಿತ ಪುಸ್ತಗಳ ಬೇಡಿಕೆಯಲ್ಲಿ 1,28,435 ಪುಸ್ತಗಳು ಸರಬರಾಜು ಆಗಿದ್ದು, 2,000 ಪುಸ್ತಕಗಳನ್ನು ವಿತರಿಸಲಾಗಿದೆ. 93,681 ಮಾರಾಟ ಪುಸ್ತಕಗಳ ಬೇಡಿಕೆಯಲ್ಲಿ 60,547 ಪುಸ್ತಗಳ ಸರಬರಾಜು ಆಗಿದ್ದು, 5,000 ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ 1,63,357 ಉಚಿತ ಪುಸ್ತಕಗಳ ಬೇಡಿಕೆಯಲ್ಲಿ 1,45,366 ಪುಸ್ತಗಳು ಬಂದಿದ್ದು, 32,000 ಪುಸ್ತಕಗಳನ್ನು ವಿತರಿಸಲಾಗಿದೆ. 99,044 ಮಾರಾಟ ಪುಸ್ತಕಗಳ ಬೇಡಿಕೆಯಲ್ಲಿ 64,374 ಪುಸ್ತಗಳು ಇಲಾಖೆಗೆ ಬಂದಿದೆ. ಯಳಂದೂರು ತಾಲೂಕಿನಲ್ಲಿ 1,10,008 ಉಚಿತ ಪುಸ್ತಗಳ ಬೇಡಿಕೆಯಲ್ಲಿ 64,433 ಪುಸ್ತಗಳು ಬಂದಿದೆ. 23,593 ಮಾರಾಟ ಪುಸ್ತಕಗಳಲ್ಲಿ 14,652 ಪುಸ್ತಕಗಳು ಬಂದಿದ್ದು, 1050 ಪುಸ್ತಕಗಳನ್ನು ವಿತರಿಸಲಾಗಿದೆ. ಹನೂರು ತಾಲೂಕಿನಲ್ಲಿ 2,23,954 ಉಚಿತ ಪುಸ್ತಕಗಳ ಬೇಡಿಕೆಯಲ್ಲಿ 1,13,118 ಪುಸ್ತಕ ಬಂದಿದ್ದು, ಈಗಾಗಲೇ 12,443 ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. 81,626 ಮಾರಾಟ ಪುಸ್ತಕಗಳಲ್ಲಿ 52,864 ಪುಸ್ತಗಳು ಸರಬರಾಜು ಆಗಿದ್ದು, 6872 ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.
ಕಳೆದ ವರ್ಷ ಪಠ್ಯಪುಸ್ತಕ ಪರಿಷ್ಕರಣೆಯಿಂದ ಕೆಲವು ಚಟುವಟಿಕೆ ಪುಸ್ತಕಗಳ ವಿಳಂಬದಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೊಂದರೆ ಅನುಭವಿಸಿದ್ದರು. ಆದರೆ, ಈ ಬಾರಿ ಲೋಕಸಭೆ ಚುನಾವಣೆ ಕೆಲಸದ ಒತ್ತಡದ ನಡುವೆಯೂ, ಸಕಾಲಕ್ಕೆ ಪಠ್ಯ ಪುಸ್ತಕಗಳನ್ನು ವಿತರಿಸುತ್ತಿರುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
ಶೇ.60ಕ್ಕಿಂತಲೂ ಹೆಚ್ಚಿನ ಪುಸ್ತಕ ಸರಬರಾಜು
ಜಿಲ್ಲೆಯಲ್ಲಿ ಒಟ್ಟು 11,55,957 ಉಚಿತ ಪುಸ್ತಗಳ ಬೇಡಿಕೆಯಲ್ಲಿ 6,50,369 ಪುಸ್ತಕಗಳು ಇಲಾಖೆಗೆ ಸರಬರಾಜು ಆಗಿದ್ದು, ಶೇ.62 ರಷ್ಟು ಪುಸ್ತಕಗಳು ಈಗಾಗಲೇ ಇಲಾಖೆ ಕೈಸೇರಿದೆ. ಈಗಾಗಲೇ ಶಾಲೆಗಳಿಗೆ ವಿತರಣೆ ಮಾಡಲಾಗುತ್ತಿದೆ. ಅನುದಾನ ರಹಿತ ಶಾಲೆಗಳ 4,20,392 ಮಾರಾಟ ಪುಸ್ತಕಗಳ ಬೇಡಿಕೆಯಲ್ಲಿ 2,65,986 ಪುಸ್ತಕಗಳು ಸರಬರಾಜಾಗಿದ್ದು, ಶೇ.64 ರಷ್ಟು ಪುಸ್ತಕಗಳು ಇಲಾಖೆ ಕೈ ಸೇರಿದೆ. ಹಂತಹಂತವಾಗಿ ಮೇ ಕೊನೆಯ ವಾರದಲ್ಲಿ ಸಂಪೂರ್ಣವಾಗಿ ಹೊಸ ಪಠ್ಯಪುಸ್ತಕಗಳು ಇಲಾಖೆಗೆ ಸರಬರಾಜು ಆಗಲಿದ್ದು, ಹಂತ ಹಂತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪಠ್ಯಪುಸ್ತಕ ಹಾಗೂ ಸಮವಸಗಳನ್ನು ಶಾಲೆಗಳಿಗೆ ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೇ.100 ರಷ್ಟು ಸಮವಸ್ತ್ರ ಸರಬರಾಜು
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸರ್ಕಾರವೇ ಉಚಿತವಾಗಿ ಪಠ್ಯ ಪುಸ್ತಕದ ಜತೆಯಲ್ಲೇ ಸಮವಸ್ತ್ರವನ್ನೂ ನೀಡುತ್ತಿದೆ. ಈಗಾಗಲೇ ಶೇ.60 ಕ್ಕಿಂತಲೂ ಹೆಚ್ಚು ಪಠ್ಯಪುಸ್ತಕ ಸರ್ಕಾರದಿಂದ ಇಲಾಖೆಗೆ ಸರಬರಾಜು ಆಗಿದ್ದು, ಹಂತಹಂತವಾಗಿ ವಿತರಣೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಸಮವಸ ಶೇ.100 ರಷ್ಟು ಸರಬರಾಜು ಆಗಿದ್ದು, ಸಮವಸ್ತ್ರವನ್ನು ಹಂತಹಂತವಾಗಿ ಪೂರೈಕೆ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೇ 29 ರಿಂದ ಶಾಲೆಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಶಾಲೆ ಪ್ರಾರಂಭವಾಗುವ ಮೊದಲ ದಿನದಲ್ಲೇ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಣೆ ಮಾಡುತ್ತೇವೆ. ಈ ಕುರಿತು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ರಾಮಚಂದ್ರರಾಜೇ ಅರಸ್, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ, ಚಾಮರಾಜನಗರ