

ಹನೂರು :ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ದುರಸ್ತಿಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಶುಕ್ರವಾರ ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಡೇಗೌಡನ ದೊಡ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರಂಗಮ್ಮ ಎಂಬುವರು ಮಾತನಾಡಿ, ಕಳೆದ ಒಂದು ವಾರದ ಹಿಂದೆ ವಿದ್ಯುತ್ ಕೇಬಲ್ ಸುಟ್ಟುಹೋದ ಪರಿಣಾಮ ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್ ಕಡಿತಗೊಂಡಿದೆ. ಇದರಿಂದ ನೀರು ಸರಬರಾಜು ಮಾಡುವ ಮೋಟಾರ್‌ಗೆ ವಿದ್ಯುತ್ ಸಂಪರ್ಕವಿಲ್ಲದೇ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಜತೆಗೆ ಸ್ನಾನ ಹಾಗೂ ಶೌಚಗೃಹಕ್ಕೂ ತೆರಳಲು ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಿದ್ದಮ್ಮ ಎಂಬುವರು ಮಾತನಾಡಿ, ವಿದ್ಯುತ್ ಕಡಿತಗೊಂಡಿರುವುದರಿಂದ ಗ್ರಾಮದಲ್ಲಿ ಕಗ್ಗತ್ತಲು ಆವರಿಸಿದ್ದು, ರಾತ್ರಿ ವೇಳೆ ಕಾಡುಪ್ರಾಣಿಗಳು ಗ್ರಾಮದತ್ತ ಲಗ್ಗೆ ಇಡುತ್ತಿವೆ. ನೀರಿನ ಸಮಸ್ಯೆ ತಲೆದೂರಿರುವ ಪರಿಣಾಮ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾಗಿದೆ. ಇತ್ತ ಪದೇ ಪದೆ ದುರಸ್ತಿಗೊಳ್ಳುತ್ತಿರುವ ಕೇಬಲ್ ಅನ್ನು ಬದಲಾಯಿಸುವಂತೆ ಒತ್ತಾಯಿಸಿದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಮಲ್ಲಮ್ಮ, ಕೃಷ್ಣೇಗೌಡ, ಸಿದ್ದೇಗೌಡ, ರಂಗ, ಮಾದೇವಿ, ಪಡೇಗೌಡ, ಜಡೇಗೌಡ ಸೇರಿದಂತೆ ಇನ್ನಿತರರು ಇದ್ದರು.