

ಚಾಮರಾಜನಗರ : ನಗರದ 15ನೇ ವಾರ್ಡ್‌ನ ಸೋಮಣ್ಣ ಲೇಔಟ್‌ನಲ್ಲಿ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಮನೆಯನ್ನು ನಗರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.
ನಗರದ ಸೋಮಣ್ಣ ಲೇಔಟ್‌ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತೀಚೆಗೆ ಮನೆ ತೆರವು ಮಾಡುವಂತೆ ಕೋರ್ಟ್ ಆದೇಶಿಸಿತ್ತು.
ಅದರಂತೆ ಗುರುವಾರ ಪೊಲೀಸರ ಭದ್ರತೆ, ಜೆಸಿಬಿಯೊಂದಿಗೆ ಮನೆ ಬಳಿ ತೆರಳಿದ ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಕುಟುಂಬದವರನ್ನು ಮನವೊಲಿಸಲು ಯತ್ನಿಸಿದರು. ಈ ವೇಳೆ ಮನೆಯ ಮಾಲೀಕ ಸಿದ್ದರಾಜು ನಗರಸಭೆ ವತಿಯಿಂದ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವ ತನಕ ಮನೆಯನ್ನು ತೆರವು ಮಾಡಲ್ಲ ಎಂದು ಪಟ್ಟುಹಿಡಿದರು.
ನಗರಸಭೆ ಕಂದಾಯ ಅಧಿಕಾರಿ ಶರವಣ ಮಾತನಾಡಿ, ನಗರಸಭೆಗೆ ಸೇರಿದ ನಿವೇಶನ ನೀಡಲಾಗುವುದು. ಮನೆ ತೆರವು ಮಾಡಿದ ನಂತರ ಕುಟುಂಬಕ್ಕೆ ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗುವುದು. ನಂತರ ನಗರಸಭೆ ವತಿಯಿಂದ ಬೇರೆ ಕಡೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುಟುಂಬ ಮನೆ ನಿರ್ಮಿಸಿ ಕೊಟ್ಟ ಮೇಲೆ ತೆರವುಗೊಳಿಸಿ ಎಂದು ಪಟ್ಟುಹಿಡಿದರು. ಮನೆ ತೆರವುಗೊಳಿಸುವಂತೆ ನೋಟಿಸ್ ನೀಡದೆ ಪೊಲೀಸರನ್ನು ಕರೆ ತಂದು ಏಕಾಏಕಿ ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ. ಮೇಲ್ವರ್ಗದವರು ಸೇರಿ ತಳಸಮುದಾಯದ ಕುಟುಂಬವನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಕುಟುಂಬದವರು ದೂರಿದರು.
ಈ ವೇಳೆ ಕುಟುಂಬದವರು ನಗರಸಭೆಯ ಅಧಿಕಾರಿಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಕುಟುಂಬದವರು ಮನೆ ಒಳಗೆ ಹೋಗಿ ಬೀಗ ಹಾಕಿಕೊಂಡರು. ಮನೆಗೆ ತೆರಳಿದ ಪೊಲೀಸರು ಕುಟುಂಬವನ್ನು ವಶಕ್ಕೆ ಪಡೆದು ಜೆಸಿಬಿಗಳ ಮೂಲಕ ಮನೆಯನ್ನು ಕೆಡವಲಾಯಿತು. ಮನೆ ಕಳೆದುಕೊಂಡ ಕುಟುಂಬವನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಿದ್ದು, ನಗರಸಭೆ ವತಿಯಿಂದಲೇ ಬಾಡಿಗೆ ಪಾವತಿಸಲಾಗುತ್ತದೆ. ನಗರಸಭೆಯಿಂದ ಉಚಿತ ನಿವೇಶನ ಹಾಗೂ ಮನೆ ನಿರ್ಮಾಣ ಮಾಡಿಕೊಡುವಂತೆ ತಹಸೀಲ್ದಾರ್ ಬಸವರಾಜ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಗರಸಭಾ ಪೌರಾಯುಕ್ತ ರಾಮದಾಸ್, ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್ ರಾಜೇಶ್ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.