ಜಂತುಹುಳು ನಿವಾರಣೆ ಮಾತ್ರೆ ವಿತರಣೆ

16rajesh9
Published on

ಚಾಮರಾಜನಗರ : ಯಳಂದೂರು ತಾಲೂಕಿನ ಗುಂಬಳ್ಳಿ, ಉಪ್ಪಿನಮೋಳೆ ಹಾಗೂ ಯರಗಂಬಳ್ಳಿ ಗ್ರಾಮಗಳಲ್ಲಿ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮೇ.13 ರಿಂದ 27 ರವರೆಗೆ ಜಂತುಹುಳ ನಿವಾರಣೆ ಮಾತ್ರೆಯನ್ನು ವಿತರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಟಿ.ಜೆ.ಸುರೇಶ್ ಮಾತನಾಡಿ, 1 ರಿಂದ 19 ವಯಸ್ಸಿನ ಮಕ್ಕಳಿಗೆ ಮೇ.13 ರಿಂದ 27ರವರೆಗೆ ಸಮುದಾಯ ಆಧಾರಿತ ಕಾರ್ಯಕ್ರಮದ ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜಂತು ಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜಂತುಹುಳು ನಿವಾರಣೆಗಾಗಿ ಇಲಾಖೆಯು ಮಕ್ಕಳಿಗೆ ಉಚಿತವಾಗಿ ವರ್ಷಕ್ಕೆ ಎರಡು ಬಾರಿ ಅಲ್ಬೆಂಡ್‌ಜೋಲ್ ಮಾತ್ರೆ ನೀಡಲಾಗುತ್ತದೆ ಎಂದರು.

ಜಂತುಹುಳು ಬಾಧೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಕಲಿಕೆಯಲ್ಲಿ ಹಿಂದುಳಿಯುವಿಕೆ ಹಾಗೂ ರಕ್ತಹೀನತೆ ಉಂಟಾಗಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಮಣ್ಣಿನಲ್ಲಿ ಆಟವಾಡುವ ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಕೈತೊಳೆಯುವ ಅಭ್ಯಾಸ ಇಲ್ಲದಿದ್ದರೆ ಜಂತುಬಾಧೆ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಮಣ್ಣಿನಲ್ಲಿ ಆಟವಾಡಿ ಬಂದ ನಂತರ, ಶೌಚಾಲಯ ಬಳಸಿದ ನಂತರ, ಊಟಕ್ಕೆ ಮೊದಲು ಮತ್ತು ಊಟದ ನಂತರ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ಮಾಡಿಸಿ ಮಕ್ಕಳನ್ನು ಕಾಯಿಲೆಗಳಿಂದ ರಕ್ಷಿಸಿ ಎಂದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಉಮಾ ಮಹೇಶ್ವರಿ, ಗೌರಮ್ಮ, ಲಕ್ಷ್ಮೀ ಶಿವಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net