

ಹನೂರು: ತಾಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮಗಳ ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸುವಂತೆ ಆಗ್ರಹಿಸಿ ಗುರುವಾರ ಭಾರತೀಯ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು
ಈ ವೇಳೆ ನೆರೆದಿದ್ದ ಸುಮಾರು 30ಕ್ಕೂ ಹೆಚ್ಚು ಪ್ರತಿಭಟನಾನಿರತರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿರುವ 10 ಸಾವಿರಕ್ಕೂ ಹೆಚ್ಚು ದೇಸಿ ತಳಿಯ ಹಸುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಮರ್ಪಕ ಮೇವು ಒದಗಿಸುವಂತೆ ಕಳೆದ 15 ದಿನಗಳ ಹಿಂದೆಯೇ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಈಗಾಗಲೇ ಹನೂರು ತಾಲೂಕು ವ್ಯಾಪ್ತಿಯಲ್ಲಿ ಪ್ರಾರಂಭಿಸಿರುವ ಗೋ ಶಾಲೆಗಳಲ್ಲಿ ಉಚಿತ ಮೇವನ್ನು ನೀಡಲಾಗುತ್ತಿದೆ. ಇದೇ ರೀತಿ ರಾಮಾಪುರ ಹೋಬಳಿಯ ಕೊಪ್ಪ ಮಿಣ್ಯಂ, ಗಾಜನೂರು, ದಿನಳ್ಳಿ, ಜಲ್ಲಿ ಪಾಳ್ಯ, ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವು ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಗ್ರೇಡ್-2 ತಹಸಿಲ್ದಾರ್ ಧನಂಜಯ್ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಮಾತನಾಡುತ್ತಿದ್ದಂತೆ ಪ್ರತಿಭಟನಾಕಾರರು ನಾವು ಕೊಟ್ಟಿರುವ ಮನವಿಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಾ? ಇಲ್ಲಿಯವರೆಗೆ ಎಷ್ಟು ಮೇವು ಪೂರೈಕೆ ಮಾಡಲಾಗಿದೆ. ಇದರ ಎಲ್ಲ ಮಾಹಿತಿ ತೆಗೆದುಕೊಂಡು ಬನ್ನಿ ಆನಂತರ ಚರ್ಚೆ ಮಾಡೋಣ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳು ಆಗಮಿಸಿ ನಮ್ಮ ಸಮಸ್ಯೆಗಳು, ಬೇಡಿಕೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಅಲ್ಲಿಯವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದು, ರಾತ್ರಿ ಸ್ಥಳದಲ್ಲೇ ಠಿಕಾಣಿ ಹೂಡಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘಟನೆಯ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋಸ್ಕೋ, ತಾಲೂಕು ಘಟಕದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸದಾನಂದ, ಜಿಲ್ಲಾ ಸಮಿತಿ ಸದಸ್ಯ ಮಣಿಗಾರ್ ಪ್ರಸಾದ್, ಡಿ.ತಂಗರಾಜು, ನಟರಾಜು ನಾಗೇಶ್, ಹುತ್ತೂರು, ವೆಂಕಟೇಶ್, ಫ್ರಾನ್ಸಿಸ್, ಶ್ರೀನಿವಾಸ್ ಇನ್ನಿತರರಿದ್ದರು.