ಡೆಂಘೆ ತಡೆಗೆ ಹೆಚ್ಚಿನ ಜಾಗೃತಿ ಅಗತ್ಯ

16rajesh2
Published on

ಚಾಮರಾಜನಗರ : ಡೆಂಘೆ ಜ್ವರದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಡೆಂಘೆಯಿಂದ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಸಲಹೆ ನೀಡಿದರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ರಾಷ್ಟ್ರೀಯ ಡೆಂಘೆ ತಡೆ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಡೆಂಘೆ ಜ್ವರವು ಈಡೀಸ್ ಎಂಬ ಸೊಳ್ಳೆಯಿಂದ ಬರುತ್ತದೆ. ಈಡೀಸ್ ಸೊಳ್ಳೆಯು ಬೇರೆ ಸೊಳ್ಳೆಗಳಿಗಿಂತ ಬುದ್ಧಿವಂತ ಮತ್ತು ಸೋಮಾರಿ ಸೊಳ್ಳೆಯಾಗಿದೆ. ಈ ಸೊಳ್ಳೆಗೆ ಮೈ ಮೇಲೆ ಬಿಳಿ ಮತ್ತು ಕಪ್ಪುಪಟ್ಟೆ ಇರುತ್ತದೆ. ಇದು ನಿಂತಿರುವ ನೀರಿನ ಹಂಚಿನಲ್ಲಿ ಮೊಟ್ಟೆಯನ್ನು ಅಂಟಿಸಿರುತ್ತದೆ. ಈ ಸೊಳ್ಳೆ ಮನುಷ್ಯರನ್ನೇ ಕಚ್ಚುತ್ತದೆ. ಈ ಮೂಲಕ ಡೆಂಘೆ ಹರಡುತ್ತದೆ. ಮಳೆಗಾಲದಲ್ಲಿ ಎಲ್ಲ ಕಡೆ ನೀರು ನಿಲ್ಲುವುದರಿಂದ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದರು.

ಯಾವುದೇ ಜ್ವರ ಮೂರು ದಿನಕ್ಕಿಂತ ಹೆಚ್ಚಾಗಿದ್ದರೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಡೆಂಘೆಗೆ ಸೂಕ್ತ ಚಿಕಿತ್ಸೆ ಇನ್ನೂ ದೊರೆತಿಲ್ಲ. ಡೆಂಘೆ ಬಂದರೆ ದೇಹದ ಹಲವು ಅಂಗಾಂಗಗಳು ವೈಫಲ್ಯವಾಗಿ ಸಾವು ಸಂಭವಿಸುತ್ತವೆ. ಡೆಂಘೆ ಬಂದವರು ಚೆನ್ನಾಗಿಯೇ ಓಡಾಡಿಕೊಂಡು ಇರುತ್ತಾರೆ. ಆದರೆ, ಅವರಿಗೆ ಜ್ವರ ಬಿಟ್ಟ ಮಾರನೇ ದಿನವೇ ಬಿಳಿ ರಕ್ತಕಣ ಕಡಿಮೆಯಾಗುವ ಸಂಭವವಿರುತ್ತದೆ. ಬಿಳಿ ರಕ್ತಕಣ 10 ಸಾವಿರಕ್ಕಿಂತ ಕಡಿಮೆ ಇಳಿದರೆ ಸಾವು ಸಂಭವಿಸುತ್ತದೆ ಎಂದು ಹೇಳಿದರು.

ಡೆಂಘೆ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಿದಾಗ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿ ಜಾಗೃತಿ ಮೂಡುತ್ತದೆ. ಅಕ್ಕಪಕ್ಕದ ಮನೆಗಳ ಜನರಿಗೂ ಡೆಂಘೆ ಹರಡುವ ರೀತಿಯನ್ನು ತಿಳಿಸಬೇಕು. ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ನೀಡಿದಾಗ ಮಾತ್ರ ಡೆಂಘೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜೇಶ್‌ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಇಲಾಖೆಯ ಪ್ರೇಮ, ದ್ವಾರಕೀಶ್, ದಯಾನಂದ್, ಭಾಸ್ಕರ್, ನಾರಾಯಣಸ್ವಾಮಿ, ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net