

ಚಾಮರಾಜನಗರ: ಸರ್ಕಾರಿ ಜಮೀನನ್ನು ಕೂಡಲೇ ದುರಸ್ಥಿಗೊಳಿಸಿ, ಇಂದಿನ ಮಾರುಕಟ್ಟೆ ದರಕ್ಕೆ ಸೂಕ್ತವಾದ ಬೆಲೆಯನ್ನು ನಿಗದಿ ಮಾಡಿ ಭೂ ಸ್ವಾಧೀನಗೊಳಿಸಿ ಎಂದು ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ರೈತರು ಆಗ್ರಹಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕೈಗಾರಿಕ ಅಭಿವೃದ್ಧಿ ಮಂಡಳಿ ವತಿಯಿಂದ ಬುಧವಾರ ಆಯೋಜಿಸಿದ್ದ ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಭೂ ಸ್ವಾಧೀನ ದರ ನಿಗದಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲ್ಲಂಬಳ್ಳಿ ಗ್ರಾಮದ ಮುಖಂಡ ಸೋಮನಾಯಕ ಮಾತನಾಡಿ, ಈ ಹಿಂದೆ ಸ್ವಯಂ ಪ್ರೇರಿತರಾಗಿ ಕೈಗಾರಿಕ ಪ್ರದೇಶಕ್ಕೆ ಭೂಮಿ ನೀಡಿದ್ದೇವೆ. ಇದರ ಲಿತಾಂಶ ಏನಾಗಿದೆ, ಅಲ್ಲಿನ ಜನರಿಗೆ ಎಷ್ಟು ಅನುಕೂಲವಾಗಿದೆ. ಯುವಕರಿಗೆ ಉದ್ಯೋಗ ಸೃಷ್ಠಿಯಾಗಿದೆಯೇ, ಇದಾವುದು ಆಗಿಲ್ಲ ಅಧಿಕಾರಿಗಳು ಎಲ್ಲೋ ಕುಳಿತುಕೊಂಡು ದರ ನಿಗದಿ ಮಾಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಗುಂಟೆಗೆ 1.97 ಲಕ್ಷ ರೂ.ಬೆಲೆ ನಡೆಯುತ್ತಿದೆ. ಇದನ್ನು ಪರಿಗಣಿಸಿ 1 ಎಕರೆ ಜಮೀನಿಗೆ 1.50 ಕೋಟಿ ರೂ. ದರವನ್ನು ನಿಗದಿಗೊಳಿಸಿ, ಇಲ್ಲದಿದ್ದರೆ 1 ತಿಂಗಳು ಗಡುವು ನೀಡುತ್ತೇವೆ. ಆಗದಿದ್ದರೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ನಮ್ಮ ಜಮೀನನ್ನು ಹಿಂದಿರುಗಿಸಿ ಎಂದು ಆಗ್ರಹಿಸಿದರು.
ಗ್ರಾ.ಪಂ ಸದಸ್ಯ ಸೋಮಶೇಖರ್ ಮಾತನಾಡಿ, ಪ್ರಸ್ತುತ ಮಾರುಕಟ್ಟೆ ದರವನ್ನು ಪರಿಗಣಿಸಿ ಸೂಕ್ತದರ ನಿಗದಿಗೊಳಿಸಿ, ಆದಷ್ಟು ಬೇಗ ಜಮೀನುಗಳನ್ನು ದುರಸ್ಥಿಗೊಳಿಸಿ, ಜಮೀನಿನಲ್ಲಿ ಇರುವ ಬೆಳೆಗೆ ಸೂಕ್ತ ಪರಿಹಾರ ನೀಡಿ, ಗ್ರಾಮಸ್ಥರಿಗೆ ಗೋಮಾಳ ಹಾಗೂ ಪ್ರತ್ಯೇಕ ಸ್ಮಶಾನಕ್ಕೆ ಜಾಗ ನೀಡಿ, ಭೂಸ್ವಾಧೀನ ಪ್ರಕ್ರಿಯೆಗೆ 16 ದಾಖಲೆಗಳನ್ನು ಕೇಳುತ್ತಿದ್ದಾರೆ ಇದನ್ನು ಇಲಾಖೆಯವರೇ ತೆಗೆದುಕೊಳ್ಳುವಂತೆ ಕ್ರಮವಹಿಸಿ ಎಂದು ಮನವಿ ಮಾಡಿದರು.
ವಕೀಲ ದಲಿತ್ ರಾಜ್ ಮಾತನಾಡಿ, ಈ ಭಾಗದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳ ಸಾಕಷ್ಟು ಜಮೀನು ಇದೆ. ಯಾವುದು ಕೂಡ ದುರಸ್ಥಿಯಾಗಿಲ್ಲ, ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಹೇಳಿದ್ದೀರಿ ಆದರೆ ಉದ್ಯೋಗ ದೊರೆಯುತ್ತಿಲ್ಲ ಎಂದರು. ಮತ್ತಷ್ಟು ರೈತರು ಮಾತನಾಡಿ, ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದ್ದು, ಒಣಭೂಮಿ ಎಂದು ನಮೂದಿಸಬೇಡಿ, ದೇವಸ್ಥಾನದ ಜಾಗ, ಕೆರೆಗಳು ಹಾಗೂ ಗೋಮಾಳವನ್ನು ವಶಪಡಿಸಿಕೊಳ್ಳಬಾರದು. ನಮ್ಮ ಭೂಮಿಗೆ ಸೂಕ್ತ ದರ ನಿಗದಿಗೊಳಿಸಿ ಎಂದು ಒತ್ತಾಯಿಸಿದರು.
ಪ್ರಭಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತ ಮಾತನಾಡಿ, ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕ ಪ್ರದೇಶದ 838 ಎಕರೆ ಜಮೀನನ್ನು ಭೂಸ್ವಾಧೀನಕ್ಕೆ ಒಳಪಡಿಸಿಕೊಳ್ಳುತ್ತಿದ್ದು, ಗ್ರಾಮಗಳ ಇತ್ತೀಚಿನ ವಹಿವಾಟನ್ನು ಗಮನಿಸಿ ದರ ನಿಗದಿ ಮಾಡುತ್ತೇವೆ. ಈಗ ಎಕರೆಗೆ 30 ಲಕ್ಷ ರೂ. ದರ ನಿಗದಿಮಾಡಲಾಗಿದೆ, ಇಲ್ಲಿ ನಿರ್ಣಯ ಮಾಡುವುದು ಅಂತಿಮವಲ್ಲ ಜಮೀನುಗಳ ದುರಸ್ಥಿ ಸಂಬಂಧ ಪ್ರತ್ಯೇಕ ಸಭೆ ಕರೆಯುತ್ತೇವೆ. ಉದ್ಯೋಗ ಸೃಷ್ಠಿಸುವ ಸಂಬಂಧ ಕೈಗಾರಿಕೆಗಳಿಗೆ ನಿಯಮ ರೂಪಿಸುತ್ತೇವೆ. ನಿಮ್ಮ ಸಲಹೆಗಳನ್ನು ಮೇಲ್ಮಟ್ಟಕ್ಕೆ ಕಳುಹಿಸಿಕೊಡುತ್ತೇವೆ. ತದ ನಂತರ ದರ ನಿರ್ಧರಿಸಲಾಗುತ್ತದೆ ಎಂದರು. ಸಭೆಯಲ್ಲಿ ಹಲವು ಇಲಾಖೆಯ ಅಧಿಕಾರಿಗಳು, ಮರಿಯಾಲ, ಮೇಲಾಜಿಪುರ, ಬದನಗುಪ್ಪೆ, ಕೆಲ್ಲಂಬಳ್ಳಿ ಹಾಗೂ ಇನ್ನಿತರೆ ಗ್ರಾಮಗಳ ಭೂಮಾಲೀಕರು ಭಾಗವಹಿಸಿದ್ದರು.