

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ತೊಳಸಿಕೆರೆ ಗ್ರಾಮದ ರೈತರಿಗೆ ನೀಡಿದ ಭರವಸೆಯಂತೆ ಮಂಗಳವಾರ ಜಿಲ್ಲಾಡಳಿತ ಜಾನುವಾರುಗಳಿಗೆ ಮೇವನ್ನು ಒದಗಿಸಿದೆ.
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಈ ಭಾಗದಲ್ಲಿ ದೇಸಿ ತಳಿಯ ಹಸುಗಳು ಹೆಚ್ಚಾಗಿದ್ದು, ಈವರೆಗೂ ಜಾನುವಾರುಗಳಿಗೆ ಯಾವ ವರ್ಷವೂ ಮೇವಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ ಈ ವರ್ಷ ಮಳೆಯಾಗದ ಪರಿಣಾಮ ಮೇವಿನ ಸಮಸ್ಯೆ ತಲೆದೋರಿತ್ತು. ಈ ಹಿನ್ನೆಲೆ ಕಳೆದ 3 ದಿನದ ಹಿಂದೆ ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಡಳಿತ ಮೇವನ್ನು ಒದಗಿಸಲಾಗಿತ್ತು. ಆದರೆ ತೊಳಸಿಕೆರೆ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದ್ದರೂ ಮೇವನ್ನು ಒದಗಿಸಲಾಗಿರಲಿಲ್ಲ.
ಮೇ 13 ರಂದು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಇಂಡಿಗನತ್ತ ಗ್ರಾಮಕ್ಕೆ ಆಗಮಿಸಿದ್ದ ವೇಳೆ ತೊಳಸಿಕೆರೆ ಗ್ರಾಮಸ್ಥರು ಮೇವನ್ನು ಒದಗಿಸುವಂತೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳು ಅಗತ್ಯ ಭರವಸೆ ನೀಡಿದ್ದರು. ಈ ಹಿನ್ನೆಲೆ 2 ಟನ್ ಮುಸುಕಿನ ಜೋಳದ ಕಡ್ಡಿಯ ಮೇವನ್ನು ಗ್ರಾಮದ ರೈತರಿಗೆ ವಿತರಿಸಲಾಗಿದ್ದು, ರೈತರು ನಿಟ್ಟುಸಿರು ಬಿಟ್ಟಂತಾಗಿದೆ.
ಗೋಶಾಲೆ ತೆರೆಯಲು ಆಗ್ರಹ : ತಾಲೂಕಿನ ಕೆಲವು ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವು ಒದಗಿಸಲಾಗುತ್ತಿದೆ. ಆದರೆ ಬೈಲೂರು, ಪಿ.ಜಿ ಪಾಳ್ಯ, ಒಡೆಯರಪಾಳ್ಯ, ಹೂಗ್ಯಂ, ಕೊಪ್ಪ, ಮಾರಳ್ಳಿ, ದಿನ್ನಳ್ಳಿ ಹಾಗೂ ಇನ್ನು ಹಲವು ಕಡೆಗಳಲ್ಲಿ ಗೋಶಾಲೆ ತೆರೆದಿಲ್ಲ. ಇದರಿಂದ ರೈತರಿಗೆ ಅನ್ಯಾಯವೆಸಗಿದಂತಾಗಿದೆ. ಈ ಹಿನ್ನೆಲೆ ಮೇ 16 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸದಾಶಿವ ತಿಳಿಸಿದ್ದಾರೆ.