ದಲಿತರ ಸ್ಮಶಾನ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶ

M.Shivanna Kandegala
Published on

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದ ಪರಿಶಿಷ್ಟ ಜಾತಿ ಸ್ಮಶಾನ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದನ್ನು ಗಣಿ ಇಲಾಖೆ ಹಿಂಪಡೆಯಬೇಕು ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಕಂದೇಗಾಲ ಮನವಿ ಮಾಡಿದರು.

ಹಿರಿಕಾಟಿ ಗ್ರಾಮದ ಸರ್ವೆ ನಂ.108 ರಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ 1997-98ನೇ ಸಾಲಿನಲ್ಲಿ ಸರ್ಕಾರದ ವತಿಯಿಂದ ಅಧಿಕೃತವಾಗಿ 2 ಎಕರೆ ಜಾಗ ಸ್ಮಶಾನಕ್ಕೆ ಮಂಜೂರಾಗಿದೆ. ಈ ಜಾಗದಲ್ಲಿ ಪ್ರಾರಂಭದಿಂದಲೂ ಶವ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಈ ಜಾಗದಲ್ಲಿ ಜಿಲ್ಲಾ ಟಾಸ್ಕ್‌ಫೋರ್ಸ್ ಕಮಿಟಿಯ ನಿಯಮಗಳನ್ನು ಉಲ್ಲಂಸಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಲವು ಹೋರಾಟದ ಪರಿಣಾಮವಾಗಿ ಗಣಿ ಇಲಾಖೆಯ ಉಪನಿರ್ದೇಶಕರು ಜಂಟಿ ಸರ್ವೆ ಮಾಡುವ ತನಕ ಗಣಿಗಾರಿಕೆ ಮಾಡಬಾರದೆಂದು ಆದೇಶ ನೀಡಿದ್ದರೂ ಗಣಿಗಾರಿಕೆ ಮುಂದುವರಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈಗ ಗಣಿಗಾರಿಕೆಯವರು ನೀಡಿರುವ ತಪ್ಪು ಮಾಹಿತಿ ಆಧಾರದ ಮೇಲೆ ಗಣಿ ಇಲಾಖೆ ಉಪನಿರ್ದೇಶಕಿ ಪದ್ಮಜಾ ಪ್ರಾಮಾಣಿಕ ತನಿಖೆ ಮಾಡದೆ ಗಣಿಗಾರಿಕೆಗೆ ಅವಕಾಶ ನೀಡಿರುವುದು ಸೂಕ್ತವಲ್ಲ. ಈ ಕೂಡಲೇ ಜಿಲ್ಲಾಡಳಿತ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ಹಿಂಪಡೆಯಬೇಕು. ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು, ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್, ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಮಹದೇವ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net