

ಚಾಮರಾಜನಗರ: ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲಸೌಕರ್ಯ ಒದಗಿಸಿ, ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಕಲ್ಪಿಸಬೇಕು. ವಿದ್ಯಾಸಿರಿ ವಿದ್ಯಾರ್ಥಿ ವೇತನ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅನುದಾನ ಹೆಚ್ಚಿಸಬೇಕು. ನೂತನ ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ನೀಡಬೇಕು. ಸ್ಥಗಿತಗೊಂಡಿರುವ ಸೈಕಲ್ ಹಾಗೂ ಲ್ಯಾಪ್‌ಟಾಪ್ ವಿತರಣೆಯನ್ನು ಮರು ಜಾರಿಗೊಳಿಸಬೇಕು. ಸ್ವಯಂ ಹಣಕಾಸು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯನ್ನು ಕೂಡಲೇ ಕೈಬಿಡಬೇಕು ಎಂಬ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಮೂಲಕ ಉಸ್ತುವಾರಿ ಸಚಿವರಿಗೆ ಸಲ್ಲಿಸಲಾಯಿತು. ಎಐಡಿಎಸ್‌ಒ ಜಿಲ್ಲಾ ಘಟಕದ ರೂಪಾ, ಕೆಂಪಮ್ಮ ಹಾಜರಿದ್ದರು.