

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ಸುತ್ತಲೇ ಸುತ್ತಾಡುತ್ತಿರುವ ಕಾಡಾನೆ ಮೈಮೇಲೆ ಗಾಯಗಳಾಗಿದ್ದು, ಕೂಡಲೇ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.
ಕಾದಾಟದಲ್ಲಿ ಗಾಯಗೊಂಡಿರುವ ಆನೆಯ ಮೈಮೇಲಿನ ಗಾಯಗಳಲ್ಲಿ ಹುಳು ಬೀಳುತ್ತಿದೆ. ಇದರಿಂದ ದಷ್ಟಪುಷ್ಟವಾಗಿ ಆರೋಗ್ಯವಾಗಿದ್ದ ಆನೆಯು ಸೊರಗುತ್ತಿದೆ. ಆದ್ದರಿಂದ ಕೂಡಲೇ ಅರಣ್ಯ ಇಲಾಖೆ ಆನೆಯ ಗಾಯಗಳಿಗೆ ಚಿಕಿತ್ಸೆ ನೀಡಿ ಉಳಿಸುವಂತೆ ಪರಿಸರಪ್ರೇಮಿಗಳು ಆಗ್ರಹಿಸಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದಲೂ ಕಾಡಾನೆ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ಸುತ್ತಲೇ ಸುಳಿದಾಡುತ್ತಿದೆ. ಪ್ರತಿದಿನವೂ ದೇವಾಲಯದ ಪ್ರಸಾದ, ಭಕ್ತರು ಬೀಸಾಡುವ ಊಟದೆಲೆ ಹಾಗೂ ಹಣ್ಣುಗಳನ್ನು ತಿನ್ನುತ್ತಾ ಯಾರಿಗೂ ತೊಂದರೆ ನೀಡದೆ ಭಕ್ತರ ಅಚ್ಚುಮೆಚ್ಚಿನದ್ದಾಗಿದೆ. ಈ ಸಲಗನನ್ನು ಭಕ್ತರು ಪ್ರೀತಿಯಿಂದ ಗೋಪಾಲ ಎಂದು ಕರೆಯುತ್ತಿದ್ದಾರೆ.
ಸುಮಾರು 35 ವರ್ಷ ವಯಸ್ಸಿನ ಗಂಡಾನೆ ಅರಣ್ಯದಲ್ಲಿ ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿದೆ. ಬೆಳಗ್ಗೆ ಕಾಡಿನಲ್ಲಿರುವ ಆನೆ ಮಧ್ಯಾಹ್ನದ ನಂತರ ಹುಲ್ಲು ಮೇಯುತ್ತಾ ನಿಧಾನಕ್ಕೆ ದೇವಾಲಯದತ್ತ ಅಗಮಿಸುತ್ತದೆ. ಸಂಜೆಯಾಗುತ್ತಿದ್ದಂತೆ ದೇವಾಲಯದ ಆವರಣ ಪ್ರವೇಶಿಸಿ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಅಡುಗೆ ಮನೆಯೊಳಗೆ ಸೊಂಡಿಲು ಚಾಚಿ ಪ್ರಸಾದಕ್ಕಾಗಿ ಅಂಗಲಾಚುತ್ತದೆ.
ಸಂಜೆ 4 ಗಂಟೆಗೆ ದೇವಾಲಯದ ಬಾಗಿಲು ಮುಚ್ಚುವ ವೇಳೆಗೆ ಮುಂಬಾಗಿಲ ಬಳಿ ಹಣ್ಣುಕಾಯಿ ಕೊಡುವವರೆಗೂ ಕದಲದೆ ನಿಲ್ಲುತ್ತಿದೆ. ಇದನ್ನು ನೋಡಿದ ಭಕ್ತರು ಆನೆಯು ಹಿಂದಿನ ಜನ್ಮದಲ್ಲಿ ಗೋಪಾಲಸ್ವಾಮಿಯ ಭಕ್ತನಾಗಿರಬೇಕು ಎಂದು ಭಾವಿಸಿ ಮೂಕ ಪ್ರಾಣಿಯ ನಿಷ್ಠೆಯನ್ನು ಮೆಚ್ಚಿ ಅಚ್ಚರಿಗೊಳ್ಳುತ್ತಿದ್ದಾರೆ. ದೈತ್ಯಾಕಾರವಿದ್ದರೂ ಇಲ್ಲಿಯವರೆಗೆ ಯಾರಿಗೂ ತೊಂದರೆ ನೀಡಿಲ್ಲ. ಅಲ್ಲದೆ ಬೆಟ್ಟಕ್ಕೆ ಬರುವ ಪ್ರವಾಸಿಗರು ಆನೆಯ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಕಾಡಾನೆಯ ನಡವಳಿಕೆ ಯಾವ ಸಂದರ್ಭದಲ್ಲಿ ಹೇಗಿರುತ್ತದೆ ಎಂಬ ಬಗ್ಗೆ ತಿಳಿಯದ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿದ್ದು, ಸಾರ್ವಜನಿಕರು ಆನೆಯ ಬಳಿಗೆ ಹೋಗುವುದನ್ನು ತಪ್ಪಿಸಲು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.