ದಲಿತರಿಗಾಗಿ ತುಡಿಯುತ್ತಿದ್ದ ಮಹಾನಾಯಕ

14rajesh3
Published on

ಚಾಮರಾಜನಗರ : ಕರ್ನಾಟಕ ರಾಜಕಾರಣದಲ್ಲಿ ಬಸವಲಿಂಗಪ್ಪ ನಂತರ ವಿ. ಶ್ರೀನಿವಾಸಪ್ರಸಾದ್ ದೊಡ್ಡ ಐಕಾನ್ ಆಗಿದ್ದರು. ಪ್ರಸಾದ್ ಮನಸ್ಸು ಸದಾಕಾಲವೂ ದಲಿತರಿಗಾಗಿಯೇ ತುಡಿಯುತ್ತಿತ್ತು. ಆ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ, ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಭಿಮಾನಿ ಸಂಸದ ವಿ.ಶ್ರೀನಿವಾಸಪ್ರಸಾದ್ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಬುದ್ಧ, ಬಸವ, ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿಯಾಗಿದ್ದರು. ಅವರು ಕೇವಲ ರಾಜಕಾರಣಿಯಾಗಿರದೇ ಅವರ ಮಾತಿನಲ್ಲಿ ತುಂಬಾ ಸ್ಪಷ್ಟತೆ, ಸರಳತೆ ಇತ್ತು. ರಾಜಕಾರಣದಲ್ಲಿ ಕೆಲವು ಸಾಹಿತಿಗಳು ಇದ್ದಾರೆ ಅವರು ರಾಜಕಾರಣ ಮಾತನಾಡುತ್ತಾರೆ. ಆದರೆ ಪ್ರಸಾದ್ ಒಬ್ಬ ಜ್ಞಾನಿಯಂತೆ ಮಾತನಾಡುತ್ತಿದ್ದರು ಎಂದು ಸ್ಮರಿಸಿದರು.

ಶ್ರೀನಿವಾಸಪ್ರಸಾದ್ ಬಿಜೆಪಿ ಸೇರಿದರೂ ಬಲಪಂಥೀಯರಾಗಲಿಲ್ಲ. ತಮ್ಮ ನಿಲುವಿಗೆ ಕಟಿಬದ್ಧರಾಗಿದ್ದರು. ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು, ಒಂದು ಗ್ಯಾಸ್ ಏಜೆನ್ಸಿ ಮತ್ತು ಸ್ವಂತ ಮನೆ ಅಲ್ಲದೇ ಏನನ್ನೂ ಸಂಪಾದಿಸಿಲ್ಲ. 2006ರಲ್ಲಿ ಬುದ್ಧನೆಡೆಗೆ ಮರಳಿ ಮನೆಗೆ ಎಂಬ ಬಹುದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಆಂದೋಲನ ಮೈಸೂರು ಜಿಲ್ಲೆಯಲ್ಲದೇ ರಾಜ್ಯಾದ್ಯಂತ ಯಶಸ್ವಿಯಾಯಿತು ಎಂದರು.

ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಪರಿಷತ್ತು ನಿರ್ದೇಶಕ ಪ್ರೊ.ಡಿ.ಆನಂದ್ ಮಾತನಾಡಿ, ಶ್ರೀನಿವಾಸಪ್ರಸಾದ್ ಒಂದು ಸಮಾಜದ ಒಳಿತಿಗಾಗಿ, ಒಂದು ಸಿದ್ಧಾಂತವನ್ನು ನಂಬಿಕೊಂಡು ದಿಟ್ಟತನದಿಂದ ಬದುಕಿದರು. ಅವರ ರಾಜಕೀಯ ನಡೆಗಿಂತಲೂ ಸಾಮಾಜಿಕ ಚಿಂತನೆಗಳು ಹೆಚ್ಚು ಆಪ್ತ ಎನಿಸುತ್ತದೆ. ನಮ್ಮೆಲ್ಲರಿಗೂ ಅವರು ಪ್ರೇರಣೆಯಾಗಿದ್ದ ಅವರು ದಲಿತರ ಪಾಲಿನ ರಕ್ಷಾಕವಚವಾಗಿದ್ದರು ಎಂದು ತಿಳಿಸಿದರು.

ಬುದ್ಧ ಮುಕ್ತಿದಾತನಲ್ಲ ಮಾರ್ಗದಾತ, ಅಂಬೇಡ್ಕರ್ ನನಗೆ ಆಧ್ಯಾತ್ಮಿಕ ನಾಯಕ ಎಂದು ಪ್ರಸಾದ್ ಹೇಳಿಕೊಳ್ಳುತ್ತಿದ್ದರು. ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಪ್ರಸಾದ್ ಮಾಡಿದ್ದಾರೆ. ತಮ್ಮ ರಾಜಕಾರಣದ ಅವಧಿಯಲ್ಲಿ ದಲಿತರ ಬೌದ್ಧಿಕ ಅಭಿವೃದ್ಧಿಗಾಗಿ ಹೆಚ್ಚು ತೊಡಗಿಸಿಕೊಂಡರು. 50 ವರ್ಷಗಳ ರಾಜಕಾರಣದಲ್ಲಿ ನನ್ನ ಸಮುದಾಯ ತಲೆತಗ್ಗಿಸುವಂತಹ ಕೆಲಸ ನಾನು ಮಾಡಿಲ್ಲ ಎಂದು ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಎರಡನೇ ಪಂಕ್ತಿಯ ನಾಯಕತ್ವದ ಕೊರತೆ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಭಂತೇಜಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು, ಶ್ರೀನಿವಾಸಪ್ರಸಾದ್ ಆಪ್ತ ಎಂ.ವೆಂಕಟಪತಿ ತಿರುಪ್ಪೂರ್ ಉಪಸ್ಥಿತರಿದ್ದರು.

ಜನರಲ್ಲಿ ನಾನು ಒಬ್ಬ
ವಿ.ಶ್ರೀನಿವಾಸಪ್ರಸಾದ್ ಅವರು ನಾನು ಜನನಾಯಕ ಮಾತ್ರವಲ್ಲ, ಜನರಲ್ಲಿ ನಾನು ಒಬ್ಬ ಎನ್ನುತ್ತಿದ್ದರು ಎಂದು ಪ್ರಸಾದ್ ಪುತ್ರಿ ಪ್ರತಿಮಾಪ್ರಸಾದ್ ನೆನೆದು ಭಾವುಕರಾದರು. ಅವರು ತಮ್ಮ ರಾಜಕೀಯ ಜೀವನದಲ್ಲಿ ಎಲ್ಲ ಸಮುದಾಯದ ಜನರ ಪ್ರೀತಿ ಗಳಿಸಿದ್ದರು. ಅವರ ಅಗಲಿಕೆ ನಮ್ಮ ಕುಟುಂಬದವರಿಗಿಂತಲೂ ಅಭಿಮಾನಿಗಳಲ್ಲಿ ಘಾಸಿಯನ್ನುಂಟು ಮಾಡಿದೆ. ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅವರ ಅಭಿಮಾನಿಗಳು ಚಾಮರಾಜನಗರಕ್ಕೆ ಪಾರ್ಥಿವ ಶರೀರವನ್ನು ತರುವಂತೆ ಮನವಿ ಮಾಡಿದ್ದರು. ವೈದ್ಯರ ಸೂಚನೆ ಮತ್ತು ಸಮಯದ ಅಭಾವದಿಂದ ತರಲು ಆಗಲಿಲ್ಲ ಎಂದು ಕ್ಷಮೆಯಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net