

ಚಾಮರಾಜನಗರ : ಆರೋಗ್ಯ ಕ್ಷೇತ್ರಕ್ಕೆ ದಾದಿಯರೇ ಆಸರೆಯಾಗಿದ್ದಾರೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಪಿ.ಮಂಜುನಾಥ್ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯರು ರೋಗಿಗಳನ್ನು ನೋಡಿ ಏನು ಚಿಕಿತ್ಸೆ ನೀಡಬೇಕು ಎಂದು ಮಾತ್ರ ಸಲಹೆ ನೀಡುತ್ತಾರೆ. ಆದರೆ, ದಾದಿಯರು ಆ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡುವ ಕೆಲಸವನ್ನು ಮಾಡುತ್ತಾರೆ. ಹಲವು ಸಂಕಷ್ಟಗಳಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ದಾದಿಯರು ನಗು ಮುಖದಿಂದ ಮಾತನಾಡಿಸುವ ಮೂಲಕ ಅವರ ಬಗ್ಗೆ ಕಾಳಜಿ ತೋರಿಸಿದರೆ, ರೋಗಿಯ ಕಾಯಿಲೆ ಅರ್ಧ ಗುಣಮುಖವಾದಂತೆ ಎಂದರು.
ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಜಿ. ವಿನಯ್‌ಕುಮಾರ್ ಮಾತನಾಡಿ, 1974 ರಿಂದ ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮದಿನವನ್ನು ವಿಶ್ವ ದಾದಿಯರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ದಾದಿಯರು ರೋಗಿಗಳನ್ನು ಆರೈಕೆ ಮಾಡುವ ಮೂಲಕ ಅವರಿಗೆ ಒಂದು ರೀತಿಯ ಸಂಜೀವಿನಿ ಆಗಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ನರ್ಸಿಂಗ್ ಕೋರ್ಸ್‌ಗೆ ಬಹು ಬೇಡಿಕೆಯಿದ್ದು, ವೃತ್ತಿ ಮತ್ತು ಆರ್ಥಿಕತೆಯ ಮೂಲವಾಗಿದೆ. ಹಾಗಾಗಿ ಇದಕ್ಕೆ ಹೆಚ್ಚು ಜನರು ಆಕರ್ಷಿತರಾಗಿದ್ದಾರೆ. ರಾಜ್ಯದಲ್ಲಿ ವರ್ಷಕ್ಕೆ 45 ಸಾವಿರ ಮಂದಿ ನರ್ಸ್‌ಗಳು ಹೊರಹೊಮ್ಮುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಿಮ್ಸ್ ವೈದ್ಯಾಧಿಕಾರಿ ಡಾ.ಮಹೇಶ್, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಎನ್.ವಿಕಾಶ್‌ನಂದಿ ಹಾಗೂ ಇತರರು ಹಾಜರಿದ್ದರು.