

ಹನೂರು: ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಕ್ಕು ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು. ಸಮುದಾಯದ ಅಭಿವೃದ್ಧಿಯತ್ತ ಗಮನಹರಿಸಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅರಣ್ಯ ಸಂಪನ್ಮೂಲ ಸಂಗ್ರಹಣೆಯ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು.
ಇದು ತಾಲೂಕಿನ ಸೋಲಿಗರ ಹಾಡಿಯಾದ ಸೇಬಿನಕೋಬೆ ಹಾಗೂ ಕಗ್ಗಲಿಗುಂದಿ ಗ್ರಾಮದಲ್ಲಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘ ಹಾಗೂ ಮಹದೇಶ್ವರಬೆಟ್ಟ ದೇವ ಸೋಲಿಗ ಕಲ್ಚರಲ್ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಆದಿವಾಸಿ ಅರಣ್ಯ ಹಕ್ಕು ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಮಾಹಿತಿ ಶಿಕ್ಷಣ ಹಾಗೂ ಸಂವಹ ತರಬೇತಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ನೀಡಿದ ಸಲಹೆಗಳು.
ತಾಲೂಕಿನಲ್ಲಿ ಸುಮಾರು 80 ಕ್ಕೂ ಹೆಚ್ಚು ಗಿರಿಜನರ ಹಾಡಿಗಳಿದ್ದು, ಸುಮಾರು 20 ಸಾವಿರ ಜನಸಂಖ್ಯೆ ಇದೆ. ಆದರೆ ಬಹುತೇಕ ಹಾಡಿಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಗಿರಿಜನ ಸಮುದಾಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಸವಲತ್ತು ನೀಡುತ್ತಿದೆ. ಅಲ್ಲದೆ ಅರಣ್ಯ ಹಕ್ಕು ಕಾಯ್ದೆಯಡಿ ಹಲವು ಅನುಕೂಲ ಕಲ್ಪಿಸಿದೆ. ಹಾಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಲು ಹಾಗೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹಾಡಿಗಳಲ್ಲಿ ಆದಿವಾಸಿ ಅರಣ್ಯ ಹಕ್ಕು ಸಮಿತಿ ರಚಿಸಿದೆ. ಈ ನಿಟ್ಟಿನಲ್ಲಿ ಮಲೆಮಹದೇಶ್ವರ, ಕಾವೇರಿ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 60 ಬುಡಕಟ್ಟು ಅರಣ್ಯ ಹಕ್ಕು ಸಮಿತಿಯ ಮುಖಂಡರು ಸೇರಿದಂತೆ 1,500 ಸದಸ್ಯರಿಗೆ ತಾಲೂಕು ಸೋಲಿಗ ಅಭಿವೃದ್ಧಿ ಸಂಘ ಹಾಗೂ ಮಹದೇಶ್ವರ ಬೆಟ್ಟ ದೇವ ಸೋಲಿಗ ಕಲ್ಚರಲ್ ಡೆವಲಪ್‌ಮೆಂಟ್ ಟ್ರಸ್ಟ್ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರ ಸಂಪನ್ಮೂಲ ತಂಡದಿಂದ ತರಬೇತಿ ಆಯೋಜಿಸಲಾಗಿದ್ದು, ಭಾನುವಾರ ಸೇಬಿನಕೋಬೆ ಹಾಗೂ ಕಗ್ಗಲಿಗುಂದಿಯಲ್ಲಿ ಮಾಹಿತಿ ಶಿಕ್ಷಣ ಹಾಗೂ ಸಂವಹ ತರಬೇತಿ ನೀಡಲಾಯಿತು.
ಕಾರ್ಯಕರ್ತ ಗಿರೀಶ್‌ಕುಮಾರ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಸರ್ಕಾರದಿಂದ ಬಹುತೇಕ ಗಿರಿಜನರಿಗೆ ಜಮೀನು ಹಕ್ಕು ಪತ್ರ ನೀಡಲಾಗಿದೆ. ಆದರೆ ಇನ್ನು ಕೆಲವರಿಗೆ ಹಕ್ಕು ಪತ್ರ ನೀಡಿಲ್ಲ. ಇದರಿಂದ ಸರ್ಕಾರದಿಂದ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಕ್ಕು ಪತ್ರ ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು. ಜತೆಗೆ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅರಣ್ಯ ಸಂಪನ್ಮೂಲಗಳನ್ನು ಸಂಗ್ರಹಿಸಿ ಆರ್ಥಿಕವಾಗಿ ಅಭಿವೃದ್ಧಿಯ ಕಡೆ ಹೆಚ್ಚಿನ ಒತ್ತು ನೀಡಬೇಕು. ಆದ್ದರಿಂದ ಸಮಿತಿ ಸದಸ್ಯರು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಗಿರಿಜನ ಮುಖಂಡರಾದ ರಂಗೇಗೌಡ, ಮಾದೇಗೌಡ, ಜಡೆಯಾ ಹಾಗೂ ಇನ್ನಿತರರು ಇದ್ದರು.