ವ್ಯಾಪಾರಿಗಳಿಗೆ ಶಕ್ತಿ ತುಂಬಿದ ರಥೋತ್ಸವ

04raju7
Published on

ಚಾಮರಾಜನಗರ: ನಗರದಲ್ಲಿ ಜರುಗಿದ ಶ್ರೀ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಣ್ಣಪುಟ್ಟ ವ್ಯಾಪಾರಿಗಳಿಗೆ ಶಕ್ತಿ ತುಂಬಿದ್ದು, ಮಂಗಳವಾರವೂ ವ್ಯಾಪಾರ ಮುಂದುವರಿಯಿತು.

ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸೋಮವಾರ ಅಪಾರ ಜನಸ್ತೋಮದ ನಡುವೆ ನೆರವೇರಿದ ರಥೋತ್ಸವದ ವೇಳೆ ದೇವಸ್ಥಾನದ ಆಸುಪಾಸಿನಲ್ಲಿ ಹೊರ ಜಿಲ್ಲೆಗಳಿಂದ ಬಂದು ಅಂಗಡಿಗಳನ್ನು ತೆರೆದಿದ್ದ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗಿದೆ. ಮಕ್ಕಳ ಆಟಿಕೆಗಳು, ಬ್ಯಾಂಗಲ್ಸ್, ಗೃಹ ಉಪಯೋಗಿ ಸಮಾನುಗಳು, ಸಿಹಿತಿಂಡಿಗಳು ಹಾಗೂ ಇತರ ಅಂಗಡಿಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿದ ಜನರು ಭರ್ಜರಿ ವ್ಯಾಪಾರ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಸಾರ್ವಜನಿಕರು, ಭಕ್ತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂತು. ಹಲವರು ಈ ದಿನವೂ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾಕಷ್ಟು ಜನರು ರಥದ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂತು. ನಗರದ ದೇವಸ್ಥಾನದ ರಸ್ತೆ, ರಥದ ಬೀದಿಯಲ್ಲಿ ಮಂಗಳವಾರವೂ ಹೆಚ್ಚಿನ ಜನಸಂದಣಿಯಿಂದಾಗಿ ವಾಹನ ಸವಾರರ ಸಂಚಾರಕ್ಕೆ ಅಡಚಣೆ ಉಂಟಾಯಿತು. ಟ್ರಾಫಿಕ್ ಸಮಸ್ಯೆಯಿಂದಾಗಿ ಜನರು ಸಹ ಕಿರಿಕಿರಿ ಅನುಭವಿಸಿದರು.

ಸ್ವಚ್ಛತಾ ಕಾರ್ಯ: ಶ್ರೀ ಚಾಮರಾಜೇಶ್ವರಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ರಾಶಿ ರಾಶಿ ಕಸ ಹರಡಿತ್ತು. ಮುಂಜಾನೆಯಿಂದಲೇ ಕಾರ್ಯಪ್ರವೃತ್ತರಾದ ನಗರಸಭೆಯ ಪೌರಕಾರ್ಮಿಕರು ದೇವಸ್ಥಾನದ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆಗಳನ್ನು ಗುಡಿಸಿ ಸ್ವಚ್ಛಗೊಳಿಸಿದರು. ಸುಮಾರು 8 ಟ್ರ್ಯಾಕ್ಟರ್‌ನಷ್ಟು ಕಸ ಸಂಗ್ರಹವಾಯಿತು. ರಥದ ಬೀದಿಯಲ್ಲಿ ಮರಳು ಹಾಕಿದ್ದರಿಂದ ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ಸಮಸ್ಯೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net