ಬಸ್ ನಿಲ್ದಾಣದ ಬಳಿ ಸಂಗ್ರಹವಾಗಿದ್ದ ತ್ಯಾಜ್ಯ ತೆರವು

Published on

ಹನೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತೆರೆದಿದ್ದ ಗುಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಭಾನುವಾರ ಹೊಟೇಲ್ ಮಾಲೀಕರು ತೆರವುಗೊಳಿಸಿ ಗುಂಡಿಯನ್ನು ಮುಚ್ಚಿಸಿದ್ದಾರೆ.

ಬಸ್ ನಿಲ್ದಾಣದಲ್ಲಿನ ಹೋಟೇಲ್ ಬಳಕೆಯ ಕೊಳಚೆ ನೀರು ಈ ಹಿಂದೆ ಮ್ಯಾನ್‌ಹೋಲ್ ಮೂಲಕ ಚರಂಡಿಗೆ ಹರಿದು ಹೋಗುತ್ತಿತ್ತು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಕಳೆದ 2 ತಿಂಗಳ ಹಿಂದೆ ಪಟ್ಟಣದಲ್ಲಿ ಕೆ.ಶಿಪ್ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಇದರಿಂದ ಕೊಳಚೆ ನೀರು ಬಸ್ ನಿಲ್ದಾಣದಲ್ಲಿ ಹರಿಯುವಂತಾಗಿತ್ತು. ಪರಿಣಾಮ ಅನೈರ್ಮಲ್ಯ ಮಾಡಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಹೊಟೇಲ್‌ನ ಸಮೀಪದಲ್ಲಿ ಜೆಸಿಬಿ ಮೂಲಕ ಗುಂಡಿಯನ್ನು ತೆಗಸಿ ಕೊಳಚೆ ನೀರು ಬಿಡಲು ಆರಂಭಿಸಿದರು. ಬಳಿಕ ಗುಂಡಿಯಲ್ಲಿ ಕೊಳಚೆ ನೀರಿನ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿ ದುರ್ನಾತ ಬೀರುತ್ತಿದ್ದು, ಬಸ್ ನಿಲ್ದಾಣದಲ್ಲಿ ಅನೈರ್ಮಲ್ಯಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ಮೇ 10ರ ವಿಜಯವಾಣಿ ಸಂಚಿಕೆಯಲ್ಲಿ ‘ಬಸ್ ನಿಲ್ದಾಣದಲ್ಲಿ ಹೋಟೆಲ್ ತ್ಯಾಜ್ಯ ಸಂಗ್ರಹ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಕೆಎಸ್ಸಾರ್ಟಿಸಿ ಇಲಾಖೆಯ ಅಧಿಕಾರಿಗಳು ಹೊಟೇಲ್ ಮಾಲೀಕರಿಗೆ ಸೂಚನೆ ನೀಡಿ ತ್ಯಾಜ್ಯವನ್ನು ವಿಲೇವಾರಿಗೊಳಿಸುವುದರ ಜತೆಗೆ ಗುಂಡಿಯನ್ನು ಮುಚ್ಚಿಸಿದ್ದಾರೆ. ಇದರಿಂದ ಸಾರ್ವಜನಿಕರು ದುರ್ನಾತದಿಂದ ನಿಟ್ಟುಸಿರು ಬಿಟ್ಟಂತಾಗಿದೆ. ಸದ್ಯ ಕೆ.ಶಿಪ್ ಯೋಜನೆಯಡಿ ಮುಖ್ಯ ರಸ್ತೆಯಲ್ಲಿ ಚರಂಡಿ ನಿರ್ಮಾಣವಾಗುವವರೆಗೆ ಸಮೀಪದಲ್ಲಿ ತಾತ್ಕಲಿಕ ಗುಂಡಿಯನ್ನು ತೆರೆದಿದ್ದು, ಸ್ವಚ್ಛತಾ ಸಂಬಂಧ ಅಗತ್ಯ ಕ್ರಮವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net